ಬೇಡಿದರೂ ನೀಡದವರು???????
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಲೇಖಕಿ: ನಾಗಲಕ್ಷ್ಮಿ ಕೆ. ಎನ್ ದಿನಾಂಕ:೨೫.೦೯.೨೦೨೫
ಬೇಡಿದರೂ
ನೀಡದವರು
ನನ್ನ
ಹಳ್ಳಿಯ ಮಣ್ಣಿನ ಗಾಳಿಯಲ್ಲೇ ಒಮ್ಮೆ ನೀತಿತುಂಬಿದ ಕಥೆಯೊಂದು ಹೊಮ್ಮಿತ್ತು. ಈ ಕಥೆಯ ಮೂಲ ನರಸಿಂಹ ಎಂಬ ನನ್ನ ಹಳ್ಳಿಯ ಕೂಲಿ
ಕೆಲಸ ಮಾಡುತ್ತಿದ್ದವ.
ಒಮ್ಮೆ
ನನ್ನ ಹಳ್ಳಿಯಲ್ಲೊಂದು ವಿಚಿತ್ರ ಘಟನೆ ಸಂಭವಿಸಿತ್ತು. ಆ
ಘಟನೆ ನನಗೆ “ಕೊಡುವುದು” ಅಥವಾ
ನೀಡುವುದು ಎಂಬುದರ ನಿಜವಾದ
ಅರ್ಥವನ್ನು ಕಲಿಸಿತು.
ನಮ್ಮ
ಹಳ್ಳಿಯಲ್ಲಿ ನಾಗಪ್ಪನೆಂಬ ರೈತನಿದ್ದ. ಆತನು ಸಾಕಷ್ಟು ಹೊಲ,
ಎತ್ತು, ಮೂಟೆಗಟ್ಟಲೆ ಅಕ್ಕಿ–ರಾಗಿ ಮತ್ತು ಧಾನ್ಯಗಳನ್ನು ಸಂಗ್ರಹಿಸಿದ್ದ.
ಇಷ್ಟು ಹೊಂದಿದ್ದು ಸುಭದ್ರ ಜೀವನವನ್ನು
ನಡೆಸುತ್ತಿದ್ದರೂ ಅವನ ಹೃದಯದಲ್ಲಿ ದಯೆಯೆಂಬ
ಒಂದು ಹನಿಯೂ ಇರಲಿಲ್ಲ.
ಜನರು ಅವನನ್ನು “ಕಂಜೂಸು ನಾಗಪ್ಪ” ಎಂದೇ ಕರೆಯುತ್ತಿದ್ದರು. ಅವನ
ಮನೆಯ ಗೋದಾಮು ಬಂಗಾರದ ಗೋಪುರದಂತೆ ಹೊಳೆಯುತ್ತಿತ್ತು, ಆದರೆ ಆ ಗೋಪುರದ
ಬಾಗಿಲು ದಾರಿದ್ರ್ಯದ ಕೈಗಳಿಗೆ ಸದಾ ಮುಚ್ಚಿರುತ್ತಿತ್ತು.
ಆದರೆ,
ಹಳ್ಳಿಯಲ್ಲಿ ನಾಗಪ್ಪನ ಮನೆಯ ಪಕ್ಕವೇ
ಇದ್ದ ಅವನ ತಮ್ಮನ ಮಗ ನರಸಿಂಹನ ಬಡಕುಟುಂಬವಿತ್ತು.
ಅವರಿವರ ಮತ್ತು ಅಕ್ಕಪಕ್ಕದವರ ಹೊಲ ಗದ್ದೆಗಳಲ್ಲಿ
ಬೆವರು ಹರಿಸಿ ನಿತ್ಯವೂ ದುಡಿಯುತ್ತಿದ್ದ, ಏನಾದರೂ ಅವನಿಗೆ
ದಿನವೂ ಅವನ ಮತ್ತು ಅವನ ಕುಟುಂಬದ ಹೊಟ್ಟೆಪಾಡೇ
ದೊಡ್ಡ ಸಮಸ್ಯೆಯಾಗಿತ್ತು. ಹಸಿವು
ಬಾಳಿನ
ನಿತ್ಯದ ಅತಿಥಿ, ಕಣ್ಣೀರು ಹಾಸಿಗೆಯ ಹೊದಿಕೆ. ಆದರೂ ಆ ಮನೆಯಲ್ಲಿ
ಪ್ರೀತಿ ಮತ್ತು ದಯೆಯ ದೀಪ ಎಂದಿಗೂ ಆರಲಿಲ್ಲ.
ಒಂದು
ಸಂಜೆ ಅವನ
ಮಗ ಅತಿಯಾದ ಜ್ವರದಿಂದ ಬಳಲುತ್ತಿದ್ದ. ವೈದ್ಯನ ಬಳಿಗೆ ಹೋಗಬೇಕಿತ್ತು. ಆದರೆ ಕೈಯಲ್ಲಿ ಒಂದು
ಬಿಡಿಗಾಸೂ ಇರಲಿಲ್ಲ. ಆಗ ನರಸಿಂಹನು
ಕಣ್ಣೆದುರು ಹೂವಿನಂತೆ
ಕರಗುತ್ತಿದ್ದ ಮಗನನ್ನು ಉಳಿಸಲು ತಡವಾಡದೆ ಅವನ ಮನೆಯ ಪಕ್ಕವೇ ಇದ್ದ
ತನ್ನ ದೊಡ್ಡಪ್ಪ ನಾಗಪ್ಪನ ಮನೆ ಬಾಗಿಲು ತಟ್ಟಿದ.
“ದೊಡ್ಡಪ್ಪ,
ನನ್ನ ಮಗನಿಗೆ ಆರೋಗ್ಯ ಸರಿಯಿಲ್ಲ, ಅವನ
ಮೈಯೆಲ್ಲ ಕೆಂಡದಂತೆ ಸುಡುತ್ತಿದೆ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಬೇಕು, ಇಲ್ಲದಿದ್ದರೆ ಮಗನ
ಜೀವ ಹೋಗುತ್ತದೆ. ಅದಕ್ಕೆ ಸ್ವಲ್ಪ
ಹಣ ಕೊಡು. ನಾಳೆ ಕೆಲಸ ಮಾಡಿ
ಹಿಂತಿರುಗಿಸುತ್ತೇನೆ,” ಎಂದು ಕೈಮುಗಿದು ಬೇಡಿಕೊಂಡ.
ನಾಗಪ್ಪ
ತನ್ನ ಕಣ್ಣನ್ನು ಸಂಕುಚಿಸಿ.
ಅವನು ತನ್ನ ಗೋದಾಮಿನ ಬಾಗಿಲು ತೋರಿಸಿ ಹೇಳಿದ –
“ನಾನು ಈಗ ನಿನಗೆ
ಸಾಲ ಕೊಟ್ಟರೆ ನಾಳೆ ಇಡೀ ಹಳ್ಳಿಯೇ
ಸಹಾಯಕ್ಕಾಗಿ ನನ್ನನ್ನೇ ನಂಬಿಕೊಂಡು ನನ್ನ
ಮನೆ ಬಾಗಿಲಿಗೆ ಬಂದು ಬಿಡುತ್ತದೆ. ಆಗ
ಅವರಿಗೆಲ್ಲ
ಪುಕ್ಕಟ್ಟೆ ಕೊಡುವ ತೊಂದರೆಯು ನನಗೆ ಬಾರದಿರಲಿ. ನಿನಗೆ ನೆರವು ಬೇಕೆಂದರೆ ಹೋಗಿ ದೇವರನ್ನು
ಕೇಳು.” ಎಂದನು ತನ್ನ ಕಠೋರ ನುಡಿಗಳಿಂದ.
ನರಸಿಂಹ
ಎಷ್ಟು ಬೇಡಿದರೂ ನಾಗಪ್ಪನ ಹೃದಯದಲ್ಲಿ ಕಲ್ಲಿನ
ಹಿಮಶಿಲೆ ಕರಗಲಿಲ್ಲ.
ನರಸಿಂಹ
ತಲೆಬಗ್ಗಿಸಿದ. ಅವನ
ಕಣ್ಣೀರಿನ ಹನಿಗಳು ಹಸಿದ ಮಣ್ಣಿನ ಮೇಲೆ
ಬಿದ್ದಾಗ, ಆ ಮಣ್ಣು ಕೂಡ
ಮಾತಾಡಿದಂತೆ:
“ನೀರು ಹೊಳೆಯಾಗಿ ಹರಿಯುವಾಗ ಹಸಿದ
ಹಕ್ಕಿಗೆ ಹನಿ ನೀರು ಸಿಗದಿದ್ದರೆ, ಅದು ನೀರಿನ ಅಪರಾಧ.”
ನರಸಿಂಹನ
ಕಣ್ಣು ತುಂಬಿತು. ಮಗನ ನರಳಾಟ ಅವನ
ಕಿವಿಗೆ ಕೇಳಿಸುತ್ತಿತ್ತು. ಆದರೆ ಕೈ ಹಿಡಿಯುವವರು
ಯಾರೂ ಇಲ್ಲ. ತಿರುಗಿ ಹೋಗುತ್ತಾ ತನ್ನ ದೊಡ್ಡಪ್ಪನಿಗೆ ಹೇಳಿದ,
“ನಾಗಪ್ಪ, ನೀನು ಎಂದಿಗೂ ಕೊಡುವುದಿಲ್ಲ
ಎಂದು ತಿಳಿದಿತ್ತು, ಆದರೆ ನನ್ನ ಮಗನ ಜೀವ ನನಗೆ ತುಂಬಾ ಮುಖ್ಯ, ಆದ್ದರಿಂದಲೇ ನಿನ್ನ ಮನೆಯ ಬಾಗಿಲಿಗೆ
ಬಂದೆ. ಆದರೆ ಇಂದಿನ ನನ್ನ
ಈ ಕಣ್ಣೀರು ನಾಳೆ ಶಾಪವಾಗಿ
ನಿನಗೇ ಬಂದು ತಟ್ಟೇ ತಟ್ಟುತ್ತದೆ.” ಎಂದು ಹೇಳಿ ಹೊರಟು ಹೋದ.
ಆ
ಮಾತು ಕೇಳಿದ ನಾಗಪ್ಪ ತಕ್ಷಣ ಬಾಗಿಲನ್ನು ದಢಾರನೇ ಮುಚ್ಚಿದ. ತನ್ನ ದವಸ ಧಾನ್ಯ
ತುಂಬಿದ ಗೊದಾಮಿನತ್ತ ಹೆಮ್ಮೆಯಿಂದ
ನೋಡಿದ. “ನಾನು ಯಾರ ಮೇಲೂ ಅವಲಂಬಿತನಾಗಿಲ್ಲ.
ನಾನು ಸುಖಿ ” ಎಂದು ಮನಸ್ಸಲ್ಲಿ ಭಾವಿಸಿದ.
ಕೆಲವು
ತಿಂಗಳುಗಳು ಕಳೆದವು, ಬೇಗನೇ ಕಾಲಚಕ್ರ ತಿರುಗಿತು. ಹಳ್ಳಿಯು ಬರದಿಂದ ಬತ್ತಿತು. ಆ ವರ್ಷ ಹಳ್ಳಿಯಲ್ಲಿ
ಭಾರೀ ಬರ ಬಂದು ಅನಾವೃಷ್ಟಿಯಿಂದಾಗಿ ಎಲ್ಲೆಲ್ಲೂ ಹನಿ ನೀರಿಲ್ಲದೆ ಹೋಯಿತು.
ಮಳೆ ಸುರಿಯದೆ ಕೆರೆಗಳು ಬತ್ತಿ ಹೋದವು. ಬಿತ್ತನೆ ಮಾಡಿದ ಬೆಳೆ ಸುಡುಬಿಸಿಲಿಗೆ ಬಾಡಿ ಹೋಯಿತು. ಆಹಾರಕ್ಕೆ
ಹಾಹಾಕಾರ ವಾಗಿ ಜನರ ಮನೆಗಳಲ್ಲಿ ಹಸಿವಿನಿಂದ
ಮಕ್ಕಳು ಮತ್ತು ವಯಸ್ಸಾದವರು ಕಣ್ಣೀರು
ಸುರಿಸುತ್ತಿದ್ದರು.
ಹಸಿರು
ಹೊಲಗಳು ಬರಡು ಭೂಮಿಯಾಗಿ ಬದಲಾದವು.
ಆದರೆ
ನಾಗಪ್ಪ ತನ್ನ ಗೋದಾಮಿನಲ್ಲಿದ್ದ ಅಕ್ಕಿ
ರಾಗಿಯನ್ನು ಕಟ್ಟುನಿಟ್ಟಾಗಿ
ಕಾವಲು ಕಾಯುತ್ತ, ಗೋದಾಮಿನಲ್ಲಿ ದವಸ ಧಾನ್ಯವನ್ನು ಬೆಟ್ಟದಂತೆ ಸೇರಿಸಿಕೊಂಡಿದ್ದ. ಆದರೆ ಆ ಬೆಟ್ಟವು
ಸಹಾಯವಿಲ್ಲದೆ ನಿಂತ ಮೃತ ಶಿಲೆಯಂತಾಗಿತ್ತು.
“ಇದು ನನ್ನದು. ನಾನು ಶ್ರಮಿಸಿ ಬೆಳೆದದ್ದು.
ಯಾರಿಗೂ ಕೊಡುವುದಿಲ್ಲ” ಎಂದು ನಿಶ್ಚಯಿಸಿದ.
ಹಳ್ಳಿಯ
ಜನ ಹಸಿವಿನಿಂದ ನರಳುತ್ತಾ, ಕಣ್ಣೀರಿನಿಂದ ಬೇಡುತ್ತಾ ಅವನ ಮನೆಯ ಬಾಗಿಲಿಗೆ ಹೋದರೂ ಅವನು ಕೊಡಲಿಲ್ಲ.
ದಿನಗಳು
ಕಳೆದವು ಕಾಲದ ಕ್ರೂರ ಹಾಸ್ಯಕ್ಕೆ ಸಿಕ್ಕು ದಾಸ್ತಾನು
ಮಾಡಿದ್ದ ಆ ಅಕ್ಕಿಯಲ್ಲಿ ಹುಳು ಹಿಡಿದು ಹಾಳಾಗಲು
ಶುರುವಾಯಿತು. ಇದರಿಂದ ಗೋದಾಮಿನಿಂದ
ಕೆಟ್ಟ ವಾಸನೆ ಬರಲು ಶುರುವಾಯಿತು.
ಆದರೆ
ಅವನಿಗೆ ಆಗ ಅರ್ಥವಾಗಲಿಲ್ಲ, “ಕೊಡದಿದ್ದರೆ
ಸಂಗ್ರಹ ಮಾಡಿದ್ದು ವ್ಯರ್ಥ, ಮತ್ತು
ಸಂಪತ್ತೂ ನಾಶ” ಎಂದು
ಸಂಪತ್ತನ್ನು
ಕೊಟ್ಟು ಹರಿಯಲು ಬಿಟ್ಟರೆ ಅದು
ಜೀವ ಸೆಲೆಯಾಗುತ್ತದೆ; ಅಲ್ಲದೇ ಹಿಡಿದಿಟ್ಟರೆ
ಅದು ಶವವಾಗುತ್ತದೆ.
ನರಸಿಂಹನ
ಉದಾರತೆ
ಇನ್ನೊಂದೆಡೆ,
ಬಡವನಾದ ನರಸಿಂಹನ ಕಥೆ ಬೇರೆಯಾಗಿತ್ತು. ಅವನ
ಮನೆಯಲ್ಲಿ ಏನೂ ಇರಲಿಲ್ಲ. ಆದರೆ
ಹಸಿದವನಿಗೆ ಕನಿಷ್ಠ ಒಂದು ತುತ್ತು ಅನ್ನ ನೀಡುವ ಮನಸ್ಸು ಇತ್ತು. ಕೆಲವೊಮ್ಮೆ ಅವನು ಹೊಟ್ಟೆ ಹಸಿವಿನಿಂದ ಇದ್ದರೂ, ಆತನು ತನ್ನ ನೆರೆಹೊರೆಯವರ
ಹಸಿವನ್ನು ನೀಗಿಸಲು ಪ್ರಯತ್ನಿಸುತ್ತಿದ್ದ.
ಜನರು
ಹೇಳುತ್ತಿದ್ದರು –
“ನರಸಿಂಹನ ಬಳಿ ಏನೂ ಇಲ್ಲ
“ಅವನ ಮನೆ ಮಣ್ಣಿನ ಗುಡಿಸಲು.
ಆದರೆ ಅವನ ಹೃದಯವೇ ಆಕಾಶ.”
ಕರುಣೆ ತುಂಬಿದ ಹೃದಯವೇ ಅವನ ದೊಡ್ಡ ಸಂಪತ್ತು.”
ಹಸಿದವರಿಗೆ
ಅನ್ನ
ನೀಡಿದಾಗ, ಅವನು ಕೊಟ್ಟದ್ದು ಕೇವಲ
ಅನ್ನವಲ್ಲ, ಅದು ಬದುಕಿನ ಆಶಾಕಿರಣ.
ಈ
ಘಟನೆಯ ನನ್ನ ಮತ್ತು ನನ್ನ ಹಳ್ಳಿಯ ಜನರ ಮನಸ್ಸಿನಲ್ಲಿ ದೊಡ್ಡ
ಪಾಠ ಕಲಿಸಿತು. “ಬೇಡಿದರೂ ನೀಡದವರು” ಕೊನೆಗೆ ಒಂಟಿಯಾಗಿ ಉಳಿದು ಬಿಡುತ್ತಾರೆ. ಅವರ ಸಂಪತ್ತು ಕೇವಲ
ಭಾರವಾಗಿ
ಸಂಗ್ರಹವಾಗುತ್ತದೆ. ಆದರೆ
ಕೊಡುವವರು, ಅವರು ಬಡವರಾದರೂ, ನೆನಪಿನಲ್ಲಿ
ಶಾಶ್ವತವಾಗಿ ಉಳಿಯುತ್ತಾರೆ.
ನಾಗಪ್ಪ
ಸಮಯದಲ್ಲಿ ಹಳ್ಳಿ ಜನಕ್ಕೆ ದವಸವನ್ನು ಕೊಟ್ಟಿದ್ದರೆ, ಅವನ ಹೆಸರನ್ನು ಇಡೀ ಹಳ್ಳಿಯೇ
ಸಂತೋಷದಿಂದ ನೆನಪಿಸಿಕೊಳ್ಳುತ್ತಿತ್ತು. ಆದರೆ ಅವನು ನೀಡದಿರುವುದರಿಂದ
ಅವನ ಹೆಸರೇ ಕಂಜೂಸುತನದ ಸಂಕೇತವಾಯಿತು.
ಕೊಡುವುದು
ಎಂದರೇ ಕೇವಲ ವಸ್ತುಗಳ
ವಿಷಯವಲ್ಲ.
ಸಮಯ
ಕೊಡುವುದು : – ಒಬ್ಬರು ಮಾತನಾಡಲು ಬಯಸಿದಾಗ ಹೃದಯದಿಂದ ಕಿವಿಗೊಟ್ಟು
ಕೇಳುವುದು.
ಪ್ರೀತಿ
ಕೊಡುವುದು : – ಸಂಬಂಧಗಳಲ್ಲಿ ಪರಸ್ಪರರಿಗೆ ಕಷ್ಟ ಸುಖಗಳಲ್ಲಿ
ಬೆಂಬಲ ತೋರಿಸುವುದು, ಸಂಕಟದಲ್ಲಿ ಕೈಹಿಡಿಯುವುದು.
ಜ್ಞಾನ
ಕೊಡುವುದು: – ತಿಳಿದಿರುವುದನ್ನು ಮುಕ್ತವಾಗಿ ಹಂಚಿಕೊಳ್ಳುವುದು,
ಬೆಳಕನ್ನು ಹಂಚುವುದು..
ಇವುಗಳನ್ನು
ಹೆಚ್ಚಾಗಿ ಕೊಟ್ಟಂತೆ, ಜೀವನ
ಇನ್ನಷ್ಟು ಸಾರ್ಥಕವಾಗುತ್ತದೆ. ಕೊಟ್ಟ ಕೈ ಎಂದಿಗೂ ಖಾಲಿಯಾಗುವುದಿಲ್ಲ.
ಕೊಟ್ಟ ಮನಸ್ಸು ಎಂದಿಗೂ ಬಡವಾಗುವುದಿಲ್ಲ.
ನಾನು
ಈ ಘಟನೆಯನ್ನು ನೆನಸಿಕೊಳ್ಳುವಾಗ
ಪ್ರತಿಯೊಂದು ಬಾರಿ ಒಂದು ಸತ್ಯ
ನನ್ನ ಮನಸ್ಸಿಗೆ ಬರುತ್ತದೆ .
“ನಾವು
ಬಾಳಿನಲ್ಲಿ ಸಂಗ್ರಹಿಸುವ ಸಂಪತ್ತು, ಧಾನ್ಯ, ಹಣ , ಇವು ಎಲ್ಲಾ
ಕಾಲಾಂತರದಲ್ಲಿ ನಾಶವಾಗುತ್ತವೆ. ಆದರೆ ಕೊಟ್ಟ ಹೃದಯ,
ಹಂಚಿದ ಪ್ರೀತಿ ಇವು
ಮಾತ್ರ ಶಾಶ್ವತವಾಗಿರುತ್ತವೆ.”
ಆದುದರಿಂದ,
ಬೇಡುವವರಿಗೆ ನೀಡದೇ ಹೋದರೆ ಅದು ಕೇವಲ ಅವರ
ನೋವಲ್ಲ, ಅದು ನಮ್ಮ ಮಾನವೀಯತೆಯ
ಸೋಲು.
ಬೇಡಿದರೂ
ನೀಡದವರು – ಕೊನೆಗೆ ತಮ್ಮದೇ ಜೀವನವನ್ನು ಬರಿದಾಗಿಸಿಕೊಳ್ಳುವವರು. ಕೊಡುವವರು ಮಾತ್ರ ನಿಜವಾದ ಶ್ರೀಮಂತರು.
ಸಂಪತ್ತು
ಸಂಗ್ರಹಿಸಿ ಕೂಡಿಟ್ಟು ಹಿಡಿದುಕೊಳ್ಳುವವನು
ಒಣ ಮೋಡದಂತೆ , ಆಕಾಶ
ತುಂಬಿದ್ದರೂ ಒಂದು
ಹನಿ ಸುರಿಸದ ಪರಿಸ್ಥಿತಿ.
ಬಡವನಾದರೂ
ತನ್ನಲ್ಲಿರುವುದನ್ನೇ ಆದರೂ ಹಂಚುವವನು
ಸಣ್ಣ ಹನಿ ಆದರೆ
ಆ ಹನಿ ದಾಹ ನೀಗುವ
ಅಮೃತವಾಗುತ್ತದೆ.
ಕೊಡದವರು
ಜೀವಂತ ಶವಗಳು; ಕೊಡುವವರು ಜೀವಂತ ಮನುಷ್ಯರು.
ನಾಗಪ್ಪ
ತನ್ನ ಗೋದಾಮಿನೊಳಗೆ ಧಾನ್ಯದ ನಡುವೆ ಕುಳಿತಿದ್ದರೂ,
ಅವನು ಒಂಟಿಯಾಗಿ ಸತ್ತು
ಹೋದ. ಅವನ ಹಳ್ಳಿಯ ಜನರ ನೆನಪಿನಲ್ಲಿ
“ಕಂಜೂಸು”
ಎಂಬ ಶಬ್ದದಲ್ಲಿ ಮಾತ್ರ ಉಳಿದು ಹೋದ.
ಆದರೆ ನರಸಿಂಹ ಬಡವನಾದರೂ, ಇಡೀ ಹಳ್ಳಿಯೇ
ಅವನನ್ನು
ನೆನಪಿಟ್ಟುಕೊಂಡಿತು – “ಅವನ ಹೃದಯವೇ ನಮ್ಮ
ಮನೆ.” ಎಂಬಂತೆ ಭಾವಿಸಿದರು.
ಹೀಗಾಗಿ
ಜೀವನದ ಸತ್ಯ ಒಂದೇ –
“ಬೇಡಿದರೂ
ನೀಡದವರು ಕೊನೆಗೆ ಶೂನ್ಯರಾಗುತ್ತಾರೆ.
ಕೊಟ್ಟವರು ಮಾತ್ರ ಕಾಲದ ಮರೆಯಾಚೆಯೂ ನಡುವೆಯೂ ಶಾಶ್ವತರಾಗುತ್ತಾರೆ.”
ಕೊಡುವುದು
ಎಂದರೆ ಕೇವಲ ನೀಡುವುದಲ್ಲ, ಬದಲಿಗೆ ಬಯಸ್ಸಿದ್ದನ್ನು ನೀಡುವುದು ಎಂದರ್ಥ.
ಅಗತ್ಯವಿರುವುದನ್ನು ಅರ್ಹರಿಗೆ ಬೇಡಿದಾಗ ನೀಡುವುದನ್ನೇ, ನಿಜವಾದ ಮಾನವೀಯತೆ ಎಂದು ಹೇಳಲಾಗುತ್ತದೆ.
ಕಿವಿಗೊಡುವ
ಸಮಯ, ಕೈಹಿಡಿಯುವ ಪ್ರೀತಿ, ಬೆಳಕು ಹಂಚುವ ಜ್ಞಾನ. ಜೀವನದ ಮಾನವೀಯ ಮೌಲ್ಯಗಳು.
ಕೊಟ್ಟ
ಕೈ ಖಾಲಿಯಾಗುವುದಿಲ್ಲ, ಕೊಟ್ಟ ಹೃದಯ ಬಡವಾಗುವುದಿಲ್ಲ.
“ಬೇಡಿದರೂ
ನೀಡದವರು” ಎಂಬುದು ಜನರ ಕೇವಲ ಅವರ ಹೃದಯದ ಕಠಿಣತೆ ಅಲ್ಲ.
ಅದು
ಮೆದುಳಿನ ರಕ್ಷಣಾ ವ್ಯವಸ್ಥೆ, ನಷ್ಟದ ಭಯ, ಪರಸ್ಪರ ಪ್ರತಿಫಲದ
ನಿರೀಕ್ಷೆ ಮತ್ತು ಸಾಮಾಜಿಕ ಒತ್ತಡಗಳ ಮಿಶ್ರಣ.
ಆದರೆ,
ದಾನಶೀಲತೆ ಅಭ್ಯಾಸವಾದಾಗ ಮೆದುಳು ಅದನ್ನು ಸಂತೋಷದ ಮೂಲವೆಂದು ಅರಿಯುತ್ತದೆ ಹಾಗಾಗಿ ಕೊಡುವುದು
ಬದುಕಿನ ನಿಜವಾದ ಶ್ರೀಮಂತಿಕೆ.
ಧನ್ಯವಾದಗಳು…....🌷🌷🌷🌷
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು