🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಲೇಖಕಿ:ನಾಗಲಕ್ಷ್ಮಿ ಕೆ. ಎನ್ ದಿನಾಂಕ:೦೯.೧೧.೨೦೨೫.
🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿
🌸 ಆರೋಗ್ಯಕರ ಬದುಕು ಎಂದರೆ
ಕೇವಲ ಸಮತೋಲನ ಆಹಾರ ಸೇವಿಸುತ್ತಾ ಜೀವಿಸುವುದು ಎಂದಲ್ಲ.
ದೇಹ, ಮನಸ್ಸು ಮತ್ತು ಆತ್ಮವು ನವರಾಗಗಳ ಶೃತಿಯಲ್ಲಿ
ಸೇರಿದ ಒಂದು ಸೌಂದರ್ಯಮಯ ಸಂಯೋಜನೆ. ಕಲಿಯ ಆವೇಶದಂತೆ ಜೀವನವನ್ನು
ಸರಿದೂಗಿಸಿಕೊಳ್ಳಲು ಅನೇಕರು ಆರಾಮದಾಯಕ ಸೌಕರ್ಯಗಳನ್ನು ಆರಿಸಿಕೊಂಡು, ಪ್ರಕೃತಿಯೊಂದಿಗಿನ ಸಮರಸದ
ಜೀವನದಿಂದ ದೂರವಾಗುತ್ತಿದ್ದಾರೆ.
ಆದರೆ “ಆರೋಗ್ಯವೇ ಮಹಾಭಾಗ್ಯ.” ಎಂಬ ಭಾರತೀಯ ತತ್ವ ಪರಂಪರೆಯ ಆದೇಶದಂತೆ,
ನಮ್ಮ ಪುರಾತನ ಜೀವನಪದ್ಧತಿ, ಯೋಗಸಾಧನೆ, ಆಯುರ್ವೇದ ವೈದ್ಯಕೀಯ ಪದ್ಧತಿ, ಮತ್ತು ಸಾತ್ವಿಕ ಆಹಾರ ಪದ್ಧತಿಗಳು
ಇಡೀ ವಿಶ್ವಕ್ಕೆ ಮಾದರಿಯಾಗಿದೆ.
ಜೀವಿಸುವುದೆಂದರೆ
ಕೇವಲ ಉಚ್ವಾಸ ನಿಚ್ವಾಸದ ಪ್ರಕ್ರಿಯೆಯಲ್ಲ; ಅದು ಜಾಗೃತ ಬದುಕು
ದೇಹ, ಮನಸ್ಸು, ಮತ್ತು ಆತ್ಮ ಒಂದೇ ತರಂಗ ವೇಗದಲ್ಲಿ
ಸ್ಪಂದಿಸಿದಾಗ ನಿಜವಾದ “ಆರೋಗ್ಯ” ಪ್ರಾರಂಭವಾಗುತ್ತದೆ.
ಆದರೆ ಇಂದಿನ ತಂತ್ರಜ್ಞಾನ ಘೀಳಿನ ಬದುಕಿನಲ್ಲಿ, ನಾವು ಸುಂದರ ಬೆಳಗಿನ ಸೂರ್ಯೋದಯದ ಸೊಬಗನ್ನು ನೋಡುವ ಸಮಯವನ್ನೇ ಕಳೆದುಕೊಂಡಿದ್ದೇವೆ.
ಇಂತಹ ಸಂದರ್ಭದಲ್ಲಿಯೇ ಭಾರತೀಯ ಜೀವನಪದ್ಧತಿಯ ಅತ್ಯುನ್ನತ ಮಾರ್ಗಗಳಾದ, ಯೋಗ, ಆಯುರ್ವೇದ, ಮತ್ತು
ಸಾತ್ವಿಕ ಚಿಂತನೆಗಳು ಮನುಕುಲಕ್ಕೆ ಹೊಸ ದಾರಿದೀಪವಾಗಿದೆ.
“ಶರೀರಮಾಧ್ಯಂ
ಖಲು ಧರ್ಮಸಾಧನಂ”
ಅಂದರೆ — ದೇಹವೇ ಧರ್ಮ (ಅಥವಾ ಕರ್ತವ್ಯ) ಸಾಧನೆಗೆ ಉಪಕರಣ.
ಅದಕ್ಕಾಗಿಯೇ
ನಮ್ಮ ಜೀವನದ ಪ್ರತಿ ಹಂತವೂ ಸಮತೋಲನ ವಾಗಿರಬೇಕು.
ಯೋಗದಿಂದ ಮನಸ್ಸು ಶಾಂತವಾಗುತ್ತದೆ, ಸಾತ್ವಿಕ ಆಹಾರದಿಂದ ದೇಹ ಶುದ್ಧವಾಗುತ್ತದೆ, ಧ್ಯಾನದಿಂದ ಆತ್ಮ
ಪ್ರಕಾಶಮಾನವಾಗುತ್ತದೆ.
ಈ ತತ್ವಗಳು ಪ್ರಾಚೀನ ಗ್ರಂಥಗಳಲ್ಲಿನ ಪುರಾಣದ ಕಟ್ಟುಕಥೆಗಳಾಗಿರದೆ,
ಇಂದಿನ ಆಧುನಿಕ ಮನುಷ್ಯನ ಜೀವನದ ಮಾರ್ಗದರ್ಶಕಗಳಾಗಿವೆ.
ಭಾರತದಲ್ಲಿ ಹಳೆಯ ಪರಂಪರೆಗಳು ಮತ್ತು ಆಧುನಿಕ ಕ್ರಮಗಳ ಒಂದು ಶಾಶ್ವತ ಸಮೃದ್ಧ ಮಿಶ್ರಣವಿದೆ. ಈ ಎರಡನ್ನೂ ಸೇರಿಸಿಕೊಂಡರೆ, ಸಮತೋಲನದಿಂದಾದ ನಿರಂತರ ಶಾಶ್ವತ ಜೀವನಶೈಲಿಯನ್ನು ರೂಪಿಸಬಹುದು. ಭಾರತೀಯ ಜೀವನಶೈಲಿಗೆ ತಕ್ಕಂತೆ ರೂಪಿಸಿದ ಒಂದು ವಿವರವಾದ ಮಾರ್ಗದರ್ಶಿ ನಿಮಗಾಗಿ……
🌾 ಪ್ರಕೃತಿಯೊಡನೆ ಸಹಜ ಸಹವಾಸ
ಭಾರತೀಯ
ಜೀವನಪದ್ಧತಿಯು ಪ್ರಕೃತಿ ಪಾಲಿಸುವ ತತ್ವಗಳ ಆಧಾರದ ಮೇಲೆ ನಿರ್ಮಿತವಾಗಿದೆ.
ಹಳ್ಳಿಗಳಲ್ಲಿನ ಬೆಳ್ಳಂಬೆಳಗ್ಗೆ ಬೀಸುವ ಶುದ್ಧ ಗಾಳಿ,
ಮನೆಯ ಹಿರಿಯಜೀವಿಯ ಕೈಯಾರೆ ತಯಾರಾದ ಆಹಾರ, ಮತ್ತು ಕಾಲಮಾನಕ್ಕೆ ತಕ್ಕಂತೆ ದೊರೆಯುವ ಆಹಾರ ಪದ್ಧತಿಗಳು
ಇವೆಲ್ಲವೂ ನಮ್ಮ ಜೀವನಕ್ಕೆ ಶಕ್ತಿ ನೀಡುತ್ತವೆ.
“ಋತುಮಾನ” ಮತ್ತು “ದಿನಚರಿ” ಎಂಬ ಆಯುರ್ವೇದ ಮೂಲ ತತ್ವಗಳು ಪ್ರಕೃತಿಯ ಚಕ್ರಕ್ಕೆ
ಹೊಂದಿಕೊಳ್ಳುವ ಜೀವನ ಮಾರ್ಗವನ್ನು ಸೂಚಿಸುತ್ತವೆ.
ಬೇಸಿಗೆಯ
ಬೇಗೆಯಲ್ಲಿ ದೇಹವನ್ನು ತಂಪು ಮಾಡುವ ಪದಾರ್ಥಗಳು. ಉದಾಹರಣೆಗೆ, ತಾಜಾ ಹಣ್ಣುಗಳಾದ ಕಲ್ಲಂಗಡಿ ಹಣ್ಣು,
ಎಳನೀರು, ತಾಟಿಹಣ್ಣು, ಮೊಸರು ಮಜ್ಜಿಗೆ ಇತ್ಯಾದಿ.
ಚಳಿಗಾಲದಲ್ಲಿ
ಬಿಸಿ
ಆಹಾರ ಬಳಕೆ ಉತ್ತಮ. ಈ ಸಮಯದಲ್ಲಿ ಹಸಿ ಕಾಳಗಳು ಮತ್ತು ಬೆಳೆಗಳು ಕಟಾವು ಮಾಡುವ ಹಂತಕ್ಕೆ ಬಂದಿರುವುದರಿಂದ,
ಧಾನ್ಯಗಳನ್ನು ಸಹ ಹಸಿಯಾಗಿಯೇ ಬಳಸಲಾಗುತ್ತದೆ. ಉದಾಹರಣೆಗೆ ಹಸಿ ಜೋಳ ಮತ್ತು ರಾಗಿ
ಮಳೆಗಾಲದಲ್ಲಿ
ಒಣಗಿಸಿದ ಧಾನ್ಯಗಳನ್ನು ಆಹಾರದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
ಈ
ರೀತಿಯ ಋತುವಿಗನುಸಾರ ಆಹಾರ ಕ್ರಮ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.ಆದ್ದರಿಂದ ಉತ್ತಮ
ಬದುಕಿಗೆ, ಸಮತೋಲಿತ ಭಾರತೀಯ
ಆಹಾರವನ್ನೇ ಸೇವಿಸಿ.
ಭಾರತದಲ್ಲಿ
ಉತ್ತಮವಾದ, ನೈಸರ್ಗಿಕ ಆಹಾರಗಳ ಒಂದು ದೊಡ್ಡದಾದ ಆಯ್ಕೆಯೇ
ಇದೆ.
ಸಂಪೂರ್ಣ
ಧಾನ್ಯಗಳಾದ, ಬ್ರೌನ್ ರೈಸ್, ರಾಗಿ, ಜೋಳ, ಸಜ್ಜೆ, ಆರ್ಕಾ,
ಓಟ್ಸ್,
ಗೋಧಿ, ಶೇಂಗಾ.
ದೇಶೀಯವಾಗಿ
ಬೆಳೆಯುವ ಕಾಳುಗಳಾದ, ತೊಗರಿಕಾಳು,
ಹೆಸರುಕಾಳು, ಅವರೆಕಾಳು, ಅಲಸಂಡೆಕಾಳು, ರಾಜ್ಮಾ,
ಕಡಲೆಕಾಳು ಇತ್ಯಾದಿ
ಪ್ರಾದೇಶಿಕ
ಹಾಗೂ ಋತುಮಾನಕ್ಕೆ ತಕ್ಕ ಆಹಾರಗಳಾಗಿ ದೊರೆಯುವ ಹಣ್ಣುಗಳು ಮತ್ತು ತರಕಾರಿಗಳು: (ಉದಾ: ಬೇಸಿಗೆಯಲ್ಲಿ ಮಾವು,
ಕಲ್ಲಂಗಡಿ,ಹಲಸು, ಚಳಿಯಲ್ಲಿ
ಸೀಬೆ, ಎಲಚಿಹಣ್ಣು)
ಆರೋಗ್ಯಕರ
ಕೊಬ್ಬುಗಳು ದೊರೆಯುವ ತುಪ್ಪ
(ಸ್ವಲ್ಪ ಪ್ರಮಾಣದಲ್ಲಿ), ಕಡಲೆ ಎಣ್ಣೆ, ಸಾಸಿವೆ
ಎಣ್ಣೆ, ತೆಂಗಿನ ಎಣ್ಣೆ ಇತ್ಯಾದಿ.
ಜೀರ್ಣಶಕ್ತಿಗೆ
ಉತ್ತಮವಾದ, ಫರ್ಮೆಂಟೆಡ್ ಆಹಾರಗಳಾದ ಮೊಸರು, ಇಡ್ಲಿ/ದೋಸೆ ಹಿಟ್ಟು.
ಈ ರೀತಿಯ ಪ್ರಾದೇಶಿಕವಾಗಿ ದೊರೆಯುವ ಹಣ್ಣು, ತರಕಾರಿ, ಸಂಪೂರ್ಣ ಧಾನ್ಯಗಳು, ಪ್ರೋಟೀನ್ಸ್ ಮತ್ತು ಆರೋಗ್ಯಕರ ಕೊಬ್ಬುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ ಮತ್ತು ಇವುಗಳೊಂದಿಗೆ ಸಕ್ಕರೆ ಮತ್ತು ಉಪ್ಪಿನ ಪ್ರಮಾಣವನ್ನು ಕಡಿಮೆ ಮಟ್ಟದಲ್ಲಿ ಸೇವಿಸುವುದರಿಂದ ಆರೋಗ್ಯಕರ ಅಬ್ಯಾಸಕ್ರಮವು ತನ್ನಿಂತಾನೆ ನಡೆಯುತ್ತದೆ, ಆಗ ಇದಕ್ಕೆ ವೇಳಾಪಟ್ಟಿಯ ಅವಶ್ಯಕತೆಯ ಇರುವುದಿಲ್ಲ.
🧘 ಯೋಗ ಮತ್ತು ಧ್ಯಾನ — ಶರೀರ, ಮನಸ್ಸು, ಆತ್ಮದ
ಸಮ್ಮಿಲನ
ಭಾರತೀಯ ಸಂಸ್ಕೃತಿಗೆ ಗುರುಪಟ್ಟತಂದುಕೊಟ್ಟ ಯೋಗ ಸಾಧನೆಯು
ವಿಶ್ವ ಮನುಕುಲಕ್ಕೆ ಸಂದ ಅಮೂಲ್ಯ ಕೊಡುಗೆ. ಯೋಗ ಎಂಬುದು ಕೇವಲ ಶರೀರದ ವ್ಯಾಯಾಮವಲ್ಲ;
ಅದು ಮಾನಸಿಕ ಶಾಂತಿ ಮತ್ತು ಆಧ್ಯಾತ್ಮಿಕ ಸಮತೋಲನದೆಡೆಗೆ ಕರೆದೊಯ್ಯುವ ಮಾರ್ಗ.
ನಿತ್ಯ ಜೀವನದಲ್ಲಿನ ಇಪ್ಪತ್ನಾಲ್ಕು ಗಂಟೆಗಳಲ್ಲಿ,
ಕೆಲ ನಿಮಿಷಗಳ ಪ್ರಾಣಾಯಾಮ, ಧ್ಯಾನ, ಮತ್ತು ಯೋಗಾಸನಾಭ್ಯಾಸ
ದೇಹದ ಜೀರ್ಣಕ್ರಿಯೆ, ನಿದ್ರೆ, ಮನೋಸ್ಥೈರ್ಯ, ಹಾಗೂ ನೆನಪಿನಶಕ್ತಿಯನ್ನು ಉತ್ತಮಗೊಳಿಸುತ್ತದೆ.
ಈ ಕಾರಣಕ್ಕೇ ವಿಶ್ವದಾದ್ಯಂತ ಪ್ರತೀ ವರ್ಷ ಜೂನ್ ೨೧ ರಂದು “International Yoga Day” ಆಚರಿಸಲಾಗುತ್ತದೆ.
ಇದರಿಂದಲೇ ನಮಗೇ ಭಾರತೀಯ ಜೀವನದ ಸತ್ಯಸಂದೇಶವನ್ನು
ವಿಶ್ವವೇ ಸ್ವೀಕರಿಸಿದೆ ಎಂಬುದು ತಿಳಿಯುತ್ತದೆ.
"ಯೋಗದ
ತಾಯ್ನಾಡು ಭಾರತವೇ ಆದರೂ, ಭಾರತೀಯರು ಅದರ ಬಗ್ಗೆ
ಹೆಚ್ಚು ಆಸಕ್ತಿ ತೋರದಿರುವುದು ನಿಜವಾಗಿಯೂ ದುದೃಷ್ಟಕರವಾಗಿದೆ.
ಯೋಗವು
ಭಾರತದ ವೇದಗಳ ಕಾಲದ ಅತ್ಯಂತ ಪ್ರಾಚೀನ ಆತ್ಮಸಾಧನೆಯ ಮಾರ್ಗ. ಆದರೆ ಅದು ಕಾಲಕ್ರಮೇಣ
“ಆಧ್ಯಾತ್ಮಿಕ ಅಭ್ಯಾಸ”ದ ಕಾರಣದಿಂದ “ಶಾರೀರಿಕ ವ್ಯಾಯಾಮ”ದ
ಮಟ್ಟಕ್ಕೆ ಇಳಿಯಿತು, ಇದರ ಫಲವಾಗಿ, ಯೋಗದ ತತ್ತ್ವ,
ದರ್ಶನ, ಧ್ಯಾನ, ಶಾಂತಿ ಮತ್ತು ಆತ್ಮಜ್ಞಾನ ಎಂಬ ಅಂಶಗಳು ಜನರ ಗಮನದಿಂದ ಮಾಯವಾದವು.
ಭಾರತೀಯರು ಅದನ್ನು “ನಮ್ಮ ಹಿರಿಯರ ಋಷಿಗಳಿಗೆ ಬೇಕಾದ ವಿಷಯ”, “ಹಳೆಯ ಕಾಲದ ಪದ್ದತಿ” ಎಂದು ಭಾವಿಸಿ
ನಿರ್ಲಕ್ಷಿಸಿಬಿಟ್ಟರು.
ಶಾಲಾ
ಕಾಲೇಜುಗಳಲ್ಲಿ ಯೋಗವನ್ನು ಪಠ್ಯಕ್ರಮದ ಭಾಗವಾಗಿ ಸೇರಿಸುವ ಬದಲು, ಅದನ್ನು ಕೇವಲ “ವಾರಕ್ಕೆ ಒಂದು ಪೀರಿಯಡ್” ಅಥವಾ
“ಯೋಗ ದಿನ”ಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ.
ಇದರ ಫಲವಾಗಿಯೇ ಇಂದಿನ ಹೊಸ ಪೀಳಿಗೆಗೆ ಯೋಗದ ಆಳವಾದ ಅರ್ಥ ಗೊತ್ತಾಗದೆ ಅದು ಕೇವಲ ಶಾರೀರಿಕ ವ್ಯಾಯಾಮದ
ಮಟ್ಟಕ್ಕೆ ಮಾತ್ರ ಸೀಮಿತವಾಗಿದೆ.
ಅಂತಾರಾಷ್ಟ್ರೀಯ
ಯೋಗ ದಿನದ ಘೋಷಣೆಯ ನಂತರ, ಭಾರತದಲ್ಲಿ ಪುನಃ ಯೋಗದ ಬಗ್ಗೆ ಅರಿವು ಹೆಚ್ಚುತ್ತಿದೆ. ಕಚೇರಿಗಳಲ್ಲಿ,
ಮತ್ತು ಸಾಮಾಜಿಕ ಜಾಲತಾಣದಲ್ಲಿ “ಮೈಂಡ್‌ಫುಲ್ನೆಸ್” ಮತ್ತು “ಧ್ಯಾನ” ದ ತರಗತಿಗಳು ಆರಂಭವಾಗಿವೆ.
ಹೀಗೆ, ಮೂಲದಿಂದ ದೂರಾದ ನಾವು ಮತ್ತೆ ಈಗ ಮೂಲದತ್ತ ಮರಳುವ ಪ್ರಯತ್ನ ಮಾಡುತ್ತಿದ್ದೇವೆ.
🍲 ಸಾತ್ವಿಕ ಆಹಾರ — ದೇಹದಷ್ಟೇ ಮನಸ್ಸಿಗೂ ಪೋಷಣೆಯ
ಮಾರ್ಗ
ಭಾರತೀಯ
ಸಂಸ್ಕೃತಿಯಲ್ಲಿ ಆಹಾರವನ್ನು “ಅನ್ನಪೂರ್ಣಾ ದೇವಿ”ಯ ಆಶೀರ್ವಾದವೆಂದೇ ಭಾವಿಸಲಾಗುತ್ತದೆ. ಶುದ್ಧ, ತಾಜಾ, ಮತ್ತು ಶುದ್ಧವಾದ, ಪ್ರಾಣಶಕ್ತಿ ತುಂಬಿರುವ
ಸಾತ್ವಿಕ ಆಹಾರ ಸೇವನೆ ಇಲ್ಲಿ ನಿತ್ಯಕ್ರಮವಾಗಿದೆ. ಇದರೊಳಗೆ ಹಣ್ಣು, ತರಕಾರಿ, ದಾಳಿಂಬೆ, ಧಾನ್ಯಗಳು,
ಮತ್ತು ತಾಜಾ ಹಾಲು ಮತ್ತು ಹಾಲಿನ ಪದಾರ್ಥಗಳು ಸೇರಿವೆ.
ತೈಲ, ಮಸಾಲೆಯುಕ್ತ ಮತ್ತು ಕೃತಕ ಪದಾರ್ಥಗಳ ಅತಿಯಾದ
ಬಳಕೆಯನ್ನು ನಿರ್ಲಕ್ಷಿಸುವ ಪದ್ದತಿ ದೇಹಕ್ಕೆಯಾವಾಗಲೂ ಹಿತಕರ.
👉 “ಯಥಾ ಅನ್ನಂ ತಥಾ ಮನಃ” ಯಾವ ರೀತಿಯ ಆಹಾರ ತಿನ್ನುತ್ತೇವೇಯೋ , ಅಂತಹುದೇ ಚಿಂತನೆ ಮನದಲ್ಲಿ ಮತ್ತು ಮೆದುಳಿನಲ್ಲಿ ಉಂಟಾಗುತ್ತದೆ.
ಇದರಿಂದಾಗಿಯೇ
ಭಾರತೀಯ ಅಡುಗೆ ಕಲೆ, ಶುದ್ಧತೆ, ಪ್ರಾರ್ಥನೆ ಮತ್ತು ಕೃತಜ್ಞತೆಯ ಮಿಶ್ರಣವಾಗಿದೆ.
🌼 ಭಾರತೀಯ ಜೀವನಪದ್ಧತಿ ವಿಶ್ವಕ್ಕೆ ಮಾದರಿಯಾಗಿರುವ
ಕಾರಣ
ಸ್ಥಿರ
ಜೀವನ ತತ್ವ: ಪ್ರಕೃತಿಯೊಡನೆ
ಸಮ್ಮಿಳಿತಗೊಂಡ, ಕಾಲಮಾನಕ್ಕೆ ತಕ್ಕ ಜೀವನತತ್ವ ಮೂಲದಿಂದಲೇ ಬಂದಿದೆ.. ಭಾರತದಲ್ಲಿ ಹವೆಯ ಹವಾಮಾನದಿಂದಾಗಿ
ನೀರಿನ
ಕೊರತೆ ಸಾಮಾನ್ಯ. ಆದ್ದರಿಂದ ಅತಿಥಿಗಳು ಮನೆಗೆ ಬಂದಾಗ ನಿಂಬು
ಜ್ಯೂಸ್, ತೆಂಗಿನೀರು ಅಥವಾ ಮಜ್ಜಿಗೆಯನ್ನು ಕುಡಿಯಲು ಕೊಡುತ್ತಾರೆ.
ಮಾನಸಿಕ
ಶಾಂತಿ: ಯೋಗ, ಧ್ಯಾನ,
ಜಪ, ಪ್ರಾರ್ಥನೆಗಳ ಮೂಲಕ ಮನಸ್ಸಿನ ಸಮತೋಲನ ಸಾಧ್ಯ. ದಿನಪತ್ರಿಕೆ ಓದುವುದು ಅಥವಾ ಮೆಡಿಟೇಶನ್ ಮಾಡುವುದು
ಮನಸ್ಸಿಗೆ ಶಾಂತಿ ನೀಡುತ್ತದೆ.
ಮನಸ್ಸು ಭಾರವಾಗಿ ಕಂಡರೆ ಯಾರಾದರೂ ನಂಬಿಕೆಯ ವ್ಯಕ್ತಿಯೊಂದಿಗೆ ಮಾತನಾಡಿ.
ನಿಮಗೆ ಆನಂದ ನೀಡುವ ಕೆಲಸಗಳಿಗೆ
ಸಮಯ ನೀಡಿ. ಮಾನಸಿಕ ನೆಮ್ಮದಿಗಾಗಿ ಆರೋಗ್ಯಕರ
ಸಂಬಂಧಗಳನ್ನು ನಿರ್ಮಿಸಿಕೊಳ್ಳುವುದರ ಮೂಲಕ, ಮನೆಯ ಹಿರಿಯರು ಮತ್ತು ಉತ್ತಮ ಸ್ನೇಹಿತರ ಜೊತೆಗೆ
ಕಾಲ ಕಳೆಯಿರಿ. ಸಮಾನ ಮನಸ್ಕ ಸಂಬಂಧಗಳೊಂದಿಗೆ ಮುಕ್ತವಾಗಿ
ಮಾತನಾಡಿ.
ಪರಿಸರ
ಸ್ನೇಹಿ ಜೀವನ: ಪ್ಲಾಸ್ಟಿಕ್
ಉಪಯೋಗವಿಲ್ಲದ, ಹಸಿರು ಆವರಣ, ನೀರಿನ ಸಂರಕ್ಷಣೆ.
ಸಾಮೂಹಿಕ
ಬಾಳು: ಕುಟುಂಬ ಮತ್ತು
ಸಮಾಜ ಕೇಂದ್ರಿತ ಜೀವನಮೌಲ್ಯಗಳು ಭಾರತದ ರಕ್ತಗತ ಜೀವನ. ಕುಟುಂಬದವರು, ಸ್ನೇಹಿತರು ಮತ್ತು ನೆರೆಹೊರೆಯವರೊಂದಿಗಿನ
ಸಮರಸದ ಜೀವನ ಒಂಟಿತನವನ್ನು ದೂರವಾಗಿಸುತ್ತದೆ. ಮೊಮ್ಮಕ್ಕಳು
ಅಜ್ಜ- ಅಜ್ಜಿಯರೊಡನೆ ಸಮಯ ಕಳೆಯುವುದು ಮನಸ್ಸನ್ನು
ಹಸಿರಾಗಿಸುತ್ತದೆ ಮತ್ತು ಉತ್ತಮ ಬಾಂಧವ್ಯಗಳನ್ನು
ಬೆಸೆಯುತ್ತದೆ. ಕುಟುಂಬದೊಡನೆ
ಸಾಂಸ್ಕೃತಿಕ/ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಪರಂಪರೆಯ ಮುಂದುವರಿಕೆಗೆ ಸಾಕ್ಷಿಯಾಗುತ್ತದೆ.
ಸಾಂಸ್ಕೃತಿಕ ಸಮೃದ್ಧಿ: ಕಲೆ, ಸಂಗೀತ, ನೃತ್ಯಗಳ ಮೂಲಕ ಮಾನಸಿಕ ಆರಾಮ ದೊರೆಯುತ್ತದೆ. ಪ್ರಾದೇಶಿಕವಾಗಿ ಜರುಗುವ ಸಂತೆ, ಜಾತ್ರೆ, ಉತ್ಸವ, ಮೇಳಗಳು ಹಬ್ಬ ಹರಿದಿನಗಳು ಮನುಷ್ಯರೊಡನೆ ಸಾಮಾಜಿಕವಾಗಿ ಸಮರಸದ ಬದುಕಿಗೆ ಪ್ರೇರಣೆ ನೀಡುತ್ತದೆ. ಮತ್ತು ಸ್ಥಳೀಯ ಸಂಸ್ಕ್ರತಿಯ ಅನಾವರಣಕ್ಕೆ ತಕ್ಕ ವೇದಿಕೆ ಒದಗಿಸುತ್ತವೆ.
ಭಾರತೀಯ ಜೀವನದ ಈ ಅತ್ಯುನ್ನತ ಮೌಲ್ಯಗಳು, ಈ ಆಧುನಿಕ ಯುಗದ ಪಾಶ್ಚಿಮಾತ್ಯ ರಾಷ್ಟ್ರಗಳಿಗೂ ಪ್ರೇರಣೆಯಾಗಿವೆ. ಹಾಗಾಗಿ ಪ್ರಪಂಚದಲ್ಲಿನ ಹಲವಾರು ರಾಷ್ಟ್ರಗಳು ಈಗ, ಭಾರತೀಯ ಮೂಲದ ಆಯುರ್ವೇದ ಚಿಕಿತ್ಸೆ, ಯೋಗ ರಿಟ್ರೀಟ್, ಮತ್ತು ಸಸ್ಯಾಹಾರ ಪದ್ಧತಿಯನ್ನು ಅನುಸರಿಸುತ್ತಿವೆ.
🌿 ಭಾರತೀಯ ಜೀವನಪದ್ಧತಿಯು ಎಲ್ಲರೂ ಹೇಳುವಂತೆ ಕೇವಲ ಪ್ರಾಚೀನ
ಪರಂಪರೆ ಅಲ್ಲವೆ ಅಲ್ಲ. ಅದು ನಿತ್ಯದ ಆರೋಗ್ಯ, ಶಾಂತಿ ಮತ್ತು ಆಧ್ಯಾತ್ಮದ ಸಮನ್ವಯ.
ಇಂದಿನ ಆಧುನಿಕ ಜೀವನದಲ್ಲಿಯೂ ಈ ತತ್ವಗಳನ್ನು ಅಳವಡಿಸಿಕೊಂಡರೆ, ಮಾನವ ಜೀವನವು ಶ್ರೇಷ್ಠವಾಗುತ್ತದೆ.
🌞 “ಆರೋಗ್ಯಕರ ಜೀವನ ಎಂದರೆ ಪ್ರಾಕೃತಿಕ ಚಿಂತನೆ, ಶುದ್ಧ ಆಹಾರ, ಶಾಂತ
ಮನಸ್ಸು ಮತ್ತು ಕೃತಜ್ಞ ಹೃದಯ.” 🌞
ಆರೋಗ್ಯಕರ
ಜೀವನವು ಒಂದು ದಿನದಲ್ಲಿ ಸಾಧಿತವಾಗುವ ಗುರಿಯಲ್ಲ.
ಅದು ಒಂದು ನಿರಂತರ ಪಯಣ.
ಭಾರತೀಯ ಜೀವನದ ತತ್ವಗಳು ನಮಗೆ ನೆನಪಿಸುವುದೇನೆಂದರೆ, “ಆರೋಗ್ಯವೆಂದರೆ ಪ್ರಕೃತಿಯೊಡನೆ ಬದುಕುವುದು,
ಮನಸ್ಸಿನೊಂದಿಗೆ ಸ್ನೇಹಿಸುವುದು, ಮತ್ತು ಆತ್ಮದೊಂದಿಗೆ ಮೌನವಾಗಿ ಮಾತನಾಡುವುದು.”
ನಮ್ಮೊಳಗಿನ
ಈ ಶಾಂತಿಯನ್ನು ಅರಿತುಕೊಂಡಾಗ, ನಮಗೆ ನಾವೇ ಪ್ರೇರಣೆ
ಆಗುತ್ತೇವೆ ಮತ್ತು ಇತರರಿಗೂ ಮಾದರಿಯಾಗುತ್ತೇವೆ…..
ಹೇಗೆಂದರೆ, ನಂದಿನಿ ಹಾಲಿನಂತೆ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಹೊಸ ಚೈತನ್ಯ,ಮತ್ತು ಆರೋಗ್ಯದ ಬೆಳಕು ತರಬಹುದು.
ಧನ್ಯವಾದಗಳು……..🌷🌷🌷🌷🌷
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು