ಗಾಂಧೀಜಿಯವರ ಪ್ರತಿಜ್ಞೆಗಳು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಹುತಾತ್ಮರ ದಿನ - ಗಾಂಧೀಜಿಯ ಪುಣ್ಯ ತಿಥಿ
ಭಾರತದ ರಾಷ್ಟ್ರಪಿತ,
ಮೋಹನದಾಸ ಕರಮಚಂದ ಗಾಂಧಿಯವರು ಮಹಾತ್ಮ ಗಾಂದಿಯೆಂದೆನಿಸಿ ಭಾರತ ಸ್ವಾತಂತ್ರ್ಯ ಚಳುವಳಿಯನ್ನು ಮುನ್ನಡೆಸಿ
೧೯೪೭ ರಲ್ಲಿ , ಭಾರತಕ್ಕೆ ಸ್ವಾತಂತ್ರ್ಯ ವನ್ನು ಮರಳಿಸಿದರು, ಇದು ನಡೆದು ಕೆಲವು ತಿಂಗಳುಗಳ ಅವಧಿಯಲ್ಲಿ
ಅಂದರೆ ೧೯೪೮ ರ ಜನವರಿ ೩೦ ರಂದು ಗಂಡೇಟಿಗೆ ಬಲಿಯಾಗಿ ಜೀವ ಬಿಟ್ಟರು, ಇಂತಹ ರಾಷ್ಟ್ರಪಿತನಿಗೆ ಗೌರವ ಸಲ್ಲಿಸಲು ಭಾರತವು ಪ್ರತಿವರ್ಷವು ಈ ದಿನವನ್ನೇ ಹುತಾತ್ಮರ ದಿನ ಎಂದು ಆಚರಿಸುತ್ತಿದೆ.
ಭಾರತಕ್ಕೆ ಸ್ವಾತಂತ್ರ್ಯ ಲಭಿಸಲು ಮುಖ್ಯ ಕಾರಣ ಲಕ್ಷಾಂತರ ಜನರ ಎಡಬಿಡದ ಹೋರಾಟ , ಅಸಂಖ್ಯಾತ ದೇಶ ಪ್ರೇಮಿಗಳ ತ್ಯಾಗ ಬಲಿದಾನಗಳು ಮತ್ತು ಚಳುವಳಿಗಳು.
ಸುಮಾರು ಎರಡು
ನೂರು ವರ್ಷಗಳ ಪರಕೀಯರ ದಾಸ್ಯದಿಂದ ಭಾರತವನ್ನು ಮುಕ್ತಿಗೊಳಿಸಲು ಗಾಂಧೀಜಿಯವರು ತಮ್ಮದೇ ಆದ ಚಳುವಳಿಯ
ಮಾರ್ಗವನ್ನು ಅನುಸರಿಸಿವ ಮೂಲಕ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.
ಗಾಂಧೀಜಿಯವರ ಅಹಿಂಸಾ ಮಾರ್ಗ ಮತ್ತು ಸತ್ಯಾಗ್ರಹದ ತತ್ವಗಳು ಇಂದಿಗೂ ಜನರನ್ನು
ಪ್ರೇರೇಪಿಸುತ್ತಿವೆ.
ಗಾಂಧೀಜಿಯವರು
ಆ ದಿನದ ಸಂಜೆಯ ಸಮಯದಲ್ಲಿ, ದೆಹಲಿಯ ಬಿರ್ಲಾ ಮಂದಿರದಲ್ಲಿ ಪ್ರಾರ್ಥನೆ ಮಾಡಲು ಹೋಗುತ್ತಿದ್ದಾಗ, ಹಿಂದೂ
ರಾಷ್ಟ್ರೀಯವಾದಿ ನಾಥೂರಾಮ್ ಗೂಡ್ಸೆಯಿಂದ ಹತ್ಯೆಗೀಡಾದರು. ಗಾಂಧೀಜಿಯವರನ್ನು ಹತ್ಯೆ ಮಾಡಿದ ಕ್ರೂರ
ಕೃತ್ಯಕ್ಕೆ ನಾಥೂರಾಮ್ ಗೂಡ್ಸೆಗೆ ಮರಣ ದಂಡನೆ ವಿಧಿಸಲಾಯಿತು.
ಮಹಾತ್ಮ ಗಾಂಧಿಜಿಯವರು
ಬಾಪೂ ಎಂದು ಜನಪ್ರಿಯರಾಗಿದ್ದರು, ಬಾಪು ರವರ ಪುಣ್ಯ ಸ್ಮರಣೆಯ ದಿನ ದೇಶದಾದ್ಯಂತ ಹಲವು ಕಾರ್ಯಕ್ರಮಗಳನ್ನು
ಆಯೋಜಿಸುವ ಮೂಲಕ ಗೌರವವನ್ನು ನೀಡಲಾಗುತ್ತದೆ.
ಮಹಾತ್ಮಗಾಂಧೀಜಿಯವರು
ಭಾರತ ಕಂಡ ಶ್ರೇಷ್ಠ ವ್ಯಕ್ತಿಗಳಲ್ಲಿ ಪ್ರಮುಖರು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಎಷ್ಟೋ
ಶ್ರೇಷ್ಠ ಮಂದಿಗಳ ಸಾಲಿನಲ್ಲಿ ಯಾವಾಗಲೂ ಪ್ರಥಮ ಪಂಕ್ತಿಯಲ್ಲಿ ನಿಲ್ಲುವ ಧೀಮಂತ ನಾಯಕ.
ಗಾಂಧೀಜಿಯವರು
ಬೇರೆಲ್ಲಾ ಚೇತನಗಳಿಗೆ ಮಿಗಿಲಾಗಿ ನಿಲ್ಲಲು ಕಾರಣ, ಅವರ ಬದ್ದತೆಗಳಿಗೆ ಅನುಗುಣವಾಗಿ ನಡೆಸಿದ ಜೀವನ,
ನುಡಿದಂತೆ ನಡೆದು ಇಡೀ ಪ್ರಪಂಚಕ್ಕೆ ಅಹಿಂಸಾ ಮಾರ್ಗವನ್ನು ಬೋದಿಸಿದ ಮಹಾನ್ ವ್ಯಕ್ತಿ.
ಸ್ವಾತಂತ್ರ್ಯ
ಹೋರಾಟವು ಮುನ್ನಡೆಸುವ ನಾಯಕನಿಲ್ಲದೆ ದಿಕ್ಕಾಪಾಲಾಗಿ
ಸಣ್ಣ ಸಣ್ಣ ತುಕಡಿಗಳಲ್ಲಿ ಹರಿದು ಹಂಚಿ ಹೋಗಿ, ಬ್ರಿಟೀಷರಿಂದ ಆ ಹೋರಾಟಗಳು ಅಲ್ಲಲ್ಲೇ ಧಮನವಾಗುತ್ತಿದ್ದವು.
೧೯೧೫ ರಲ್ಲಿ ದಕ್ಷಿಣ
ಆಫ್ರಿಕಾದಿಂದ ವಾಪಸ್ಸಾದ ಗಾಂಧೀಜಿಯವರು ಹೋರಾಟದ ನೇತೃತ್ವವನ್ನು ವಹಿಸಿಕೊಳ್ಳುವುದರ ಮೂಲಕ, ಪೂರ್ಣವಾಗಿ ಭಾರತ ಸ್ವಾತಂತ್ರ್ಯ ಚಳುವಳಿಯ ದಿಕ್ಕನ್ನು ಬದಲಿಸಿ ಅಹಿಂಸಾ
ಮಾರ್ಗವನ್ನು ಅನುಸರಿಸಿ, ಸತ್ಯಾಗ್ರಹಗಳನ್ನು ನಡೆಸುವುದರ ಮೂಲಕ, ಬ್ರಿಟೀಷರಿಗೆ ಚುರುಕು ಮುಟ್ಟಿಸಿದರು.
ಅಹಿಂಸಾ ಮಾರ್ಗವಾಗಿ
ನಿರಂತರ ಸತ್ಯಾಗ್ರಹ ಫಲವಾಗಿ ೧೯೪೭ ರ ಆಗಸ್ಟ್ ೧೫
ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದಿತು.
ಇದೆಲ್ಲದರ ಹೊರತಾಗಿಯೂ ಇಂದಿಗೂ ಗಾಂಧೀಜಿಯವರ ಜೀವನ, ಬಹುಜನ ಪ್ರೇರಿತ ಮತ್ತು ಶಾಂತಿ , ಸತ್ಯ, ನಿಷ್ಠೆ , ಪ್ರಮಾಣಿಕತೆ,
ಕರುಣೆ ಈ ಎಲ್ಲದರ ಕಾರಣವಾಗಿ.
ಮಹಾತ್ಮ ಗಾಂಧೀಜಿಯವರ
ಅಹಿಂಸೆಯ ತತ್ವಶಾಸ್ತ್ರ ಮತ್ತು ಸತ್ಯ ,ಪ್ರೀತಿ, ಶಾಂತಿ,
ಸಮಾನತೆಯ ತತ್ವಗಳಿಗಾಗಿ ಜಾಗತಿಕವಾಗಿ ಸ್ಮರಿಸುತ್ತಾರೆ.
ಸತ್ಯಾಗ್ರಹ ಮತ್ತು
ಅಸಹಕಾರದ ಮೂಲಕ ಭಾರತಕ್ಕೇ ಸ್ವಾತಂತ್ರ್ಯ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ ಬಾಪುರವರ ಜನ್ಮದಿನವನ್ನು
ಅಕ್ಟೋಬರ್ ೨ನೇ ತಾರೀಖು ವಿಶ್ವದಾದ್ಯಂತ ಆಚರಿಸಲಾಗುತ್ತದೆ.
ವಿಸ್ತಾರವಾದ ಸಾಮಾಜಿಕ
ಬದಲಾವಣೆಗೆ ವೈಯಕ್ತಿಕ ಪರಿವರ್ತನೆ ಅಗತ್ಯ ಎಂಬುದನ್ನು ಗಾಂಧೀಜಿಯವರು ಬಲವಾಗಿ ನಂಬಿದ್ದರು. ಭಾರತದಲ್ಲಿದ್ದ
ತಮ್ಮ ಆಶ್ರಮ ನಿವಾಸಿಗಳಿಗೆ ವಿವರಿಸಿದ ಕೆಲವು ಬಲವಾದ, ಬದಲಾಗದ ತತ್ವಗಳ ಆಧಾರದ ಮೇಲೆ ತಮ್ಮ ಜೀವನ
ನಡೆಸಿದರು.
ಆಶ್ರಮ ನಿವಾಸಿಗಳಿಗೆ
ವಿವರಿಸಿದ ಗಾಂಧೀಜಿಯವರ ೧೧ ತತ್ವಗಳು ಅಥವಾ ಪ್ರತಿಜ್ಞೆಗಳು ಸತ್ಯ ಅಹಿಂಸೆ, ಸ್ವದೇಶಿ, ಬ್ರಹ್ಮಚರ್ಯ,
ಅಸ್ಪೃಷ್ಯತೆ ನಿವಾರಣೆಯಂತಹ ಆದರ್ಶಗಳನ್ನು ಒಳಗೊಂಡಿದ್ದವು.
ಈ ತತ್ವಗಳು ಆಶ್ರಮ
ನಿವಾಸಿಗಳ ಜೀವನ ರೂಪಿಸಿದ್ದಲ್ಲದೆ, ಮನಸ್ಸಿನಲ್ಲಿ ಮೂಡಿದ ರಾಷ್ಟ್ರೀಯತೆಯ ಭಾವ ಸಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲು
ಪ್ರೇರೇಪಣೆ ನೀಡಿದವು.
ದಕ್ಷಿಣ ಆಫ್ರಿಕಾದಲ್ಲಿ
ನಡೆದ ಜನಾಂಗೀಯ ತಾರತಮ್ಯದ ವಿರುದ್ದದ ಪ್ರತಿಭಟನೆಯಲ್ಲಿ, ಸತ್ಯ , ಅಹಿಂಸೆ, ಧೈರ್ಯದಂತಹ ತತ್ವಗಳು
ಅನ್ಯಾಯದ ವಿರುದ್ಧ ಹೇಗೆ ಜಯಗಳಿಸುತ್ತವೆ ಎಂಬದನ್ನು ಗಾಂಧೀಜಿಯವರು ಯಶಸ್ವಿಯಾಗಿ ಪ್ರದರ್ಶನ ಮಾಡಿದ್ದರು.
ಅಲ್ಲದೆ ಮದ್ದುಗುಂಡು, ಬಂದೂಕುಗಳಿಗಿಂತ ನೈತಿಕ ಶಕ್ತಿಯು ಪ್ರಬಲವಾಗಿರುವುದನ್ನು ಅವರು ನಿರೂಪಿಸಿದರು.
ಗಾಂಧೀಜಿಯವರ ೧೧
ತತ್ವಗಳು ಅವರ ವೈಯಕ್ತಿಕ ಬದುಕಿನಲ್ಲಿ ಸತ್ಯ, ಶಾಂತಿ, ಸಮಾನತೆ, ಸಾಮಾಜಿಕ ನ್ಯಾಯ , ಬ್ರಿಟೀಷರ ವಸಾಹತುಶಾಹಿ
ಆಳ್ವಿಕೆಯಿಂದ ಭಾರತಕ್ಕೆ ಸ್ವಾತಂತ್ರ್ಯ ಚಳುವಳಿಯ ಹೋರಾಟದಲ್ಲಿ ಮಾರ್ಗದರ್ಶಿ ತತ್ವಗಳಾಗಿ ಕಾರ್ಯನಿರ್ವಹಿಸಿದವು.
ನೈತಿಕ ಮೌಲ್ಯಗಳ
ಆಧಾರಿತ ಸಾಮಾಜಿಕ ಬದಲಾವಣೆ ಮತ್ತು ಶಾಂತಿಯುತ ಪ್ರತಿರೋಧವನ್ನು ಉತ್ತೇಜಿಸಿದ ಗಾಂಧೀಜಿಯವರ ೧೧ ಪ್ರತಿಜ್ಞೆ
ಅಥವಾ ತತ್ವಗಳನ್ನು ನಾವು ಈಗ ನೋಡೋಣ.
-:ಸತ್ಯ:-
ಗಾಂಧೀಜಿಯವರು
ಸತ್ಯದ ನಡೆಯನ್ನು ಬೇರೆಲ್ಲಾ ಸದ್ಗುಣಗಳ ಮೂಲವೆಂದು ನಂಬಿದ್ದರು, ಅಲ್ಲದೇ ಸತ್ಯವೆಂಬುದು ಪದಗಳಲ್ಲಿ
ತೋರುವ ಪ್ರಾಮಾಣಿಕತೆಯಾಗಿರದೆ, ಕಾರ್ಯಗಳಲ್ಲಿ ಮತು ಉದ್ದೇಶಗಳಲ್ಲಿ ಪ್ರಮಾಣಿಕತೆ ತುಂಬಿದ ಸತ್ಯದ ಮಾರ್ಗದಲ್ಲಿಯೇ ಜೀವನ ನಡೆಸಿದರು. “ಸತ್ಯವೇ ದೇವರು “ ಎಂದು ಘೋಷಿಸುವ ಮೂಲಕ ಜೀವನದ ಪ್ರತಿಯೊಂದು
ಅಂಶದಲ್ಲಿಸತ್ಯದ ಪ್ರಾಮುಖ್ಯತೆಯನ್ನು ಅರಿತಿದ್ದರು.
೧೯೩೦ ರ ಮಾರ್ಚ್
ನ ಉಪ್ಪಿನ ಸತ್ಯಾಗ್ರಹದ ಸಮಯದಲ್ಲಿ, ಬ್ರಿಟೀಷರ ಅನ್ಯಾಯದ ಉಪ್ಪಿನ ತೆರಿಗೆಯನ್ನು ಬಹಿರಂಗಪಡಿಸಲು ಸತ್ಯವನ್ನು
ಬಳಸಿದರು.
-: ಅಹಿಂಸೆ:-
ಅಹಿಂಸೆ, ನ್ಯಾಯ
ಮತ್ತು ಸ್ವಾತಂತ್ರ್ಯಕ್ಕಾಗಿ ಗಾಂಧಿಯವರ ಹೋರಾಟದ ತಿರುಳಾಗಿತ್ತು. ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಯನ್ನು
ತರಲು ಅಹಿಂಸಾ ಶಕ್ತಿಯನ್ನು ದೃಢವಾಗಿ ನಂಬಿದ್ದರು. ಕ್ವಿಟ್ ಇಂಡಿಯಾ ಚಳುವಳಿ ಮತ್ತು ನಾಗರಿಕ ಅಸಹಕಾರ
ಚಳುವಳಿಯ ಅಭಿಯಾನಗಳು ಅಹಿಂಸೆಯಿಂದ ರೂಪುಗೊಂಡವು.
ಅಹಿಂಸೆಯನ್ನು
ಸಮಾಜ ಮತ್ತು ವ್ಯಕ್ತಿಗಳನ್ನು ರೂಪಿಸುವ ಪ್ರತಿರೋಧದ ಅತ್ಯುನ್ನತ ರೂಪ ಎಂದು ಗಾಂಧೀಜಿಯವರು ಪರಿಗಣಿಸಿದ್ದರು.
-:ಅಸ್ತೇಯ:-
(ಕದಿಯದಿರುವುದು)
ಇತರರ ವಸ್ತುಗಳನ್ನು ಮತ್ತು ಆಸ್ತಿಗಳನ್ನು ಕದಿಯಬಾರದು ಮತ್ತು ಅಪೇಕ್ಷಿಸಬಾರದು.
ಜೊತೆಗೆ ಬೇರೆಯವರ ಸಮಯ , ಅವಕಾಶ ಮತ್ತು ಘನತೆಯನ್ನು ಸಹ ಪ್ರಾಮಾಣಿಕವಾಗಿ ಗೌರವಿಸುವ ಮೂಲಕ ಸರಳ ಜೀವನಶೈಲಿಗೆ
ಗಾಂಧೀಜಿಯವರು ಒತ್ತು ಕೊಟ್ಟಿದ್ದರು.
-: ಪರಿಶದ್ದತೆ:-
(ಬ್ರಹ್ಮಚರ್ಯ)
ಗಾಂಧೀಜಿಯವರ ತತ್ವಗಳಲ್ಲಿ
ಪರಿಶುದ್ದತೆ ಅಥವಾ ಬ್ರಹ್ಮಚರ್ಯ , ಜೀವನದಲ್ಲಿ ಒಬ್ಬರ ಲೈಂಗಿಕ ಶಕ್ತಿಯ ಜವಾಬ್ದಾರಿಯುತ ಬಳಕೆಯನ್ನು
ನೆನಪಿಸುತ್ತದೆ. ಗಾಂಧೀಜಿಯವರು ತಮ್ಮ ಜೀವನದ ಉದ್ದೇಶಗಳನ್ನು ನೆರವೇರಿಸಿಕೊಳ್ಳಲು ಜೀವನದುದ್ದಕ್ಕೂ ಬ್ರಹ್ಮಚರ್ಯವನ್ನು ಆಚರಿಸಿದರು.
ಪರಿಶದ್ದತೆ ಎಂದರೆ
ಕೇವಲ ದೈಹಿಕ ಸಂಯಮವನ್ನು ಹೊಂದುವುದು ಮಾತ್ರವಲ್ಲದೆ
ಆಲೋಚನೆ ಮತ್ತು ಉದ್ದೇಶಗಳಲ್ಲಿಯೂ ಶುದ್ದತೆಯನ್ನು ಕಾಪಾಡಿಕೊಳ್ಳುವುದು.
-:ಅಪರಿಗ್ರಹ:-
(ಸ್ವಾಧೀನವಲ್ಲದ)
ಗಾಂಧೀಜಿಯವರು
ಕನಿಷ್ಠ ಜೀವನ ಶೈಲಿ ನಡೆಸುವ ಮೂಲಕ ಭೌತಿಕ ಆಸ್ತಿಯನ್ನು ಕಡಿಮೆ ಮಾಡಲು ಮತ್ತು ತೃಪ್ತಿಯನ್ನು ಅಭ್ಯಾಸ ಮಾಡುವಂತೆ ಜನರಿಗೆ ಕರೆ ನೀಡಿದರು. ಅವರ ಈ ಪ್ರತಿಜ್ಞೆಯು
ಬದ್ದತೆಯನ್ನು ಪ್ರದರ್ಶಿಸಿತು. ಭೌತಿಕ ಸಂಪತ್ತಿನ ಕಡೆಗೆನಿರ್ಲಿಪ್ತತೆ ಮತ್ತು ಆಂತರಿಕ ತೃಪ್ತಿಯ ಅನ್ವೇಷಣೆ
ಅರ್ಥಪೂರ್ಣ ಜೀವನಕ್ಕೆ ಅವಶ್ಯಕವೆಂದು ಗಾಂಧೀಜಿಯವರು ನಂಬಿದ್ದರು.
-:ಅಶೌಚ:-
(ಆಹಾರ ನಿಯಂತ್ರಣ)
ಗಾಂಧೀಜಿಯವರು
ಸ್ವತಃ ಸಸ್ಯಹಾರಿಗಳಾಗಿದ್ದರು, ಆಹಾರದ ಆಯ್ಕೆಗಳು
ದೈಹಿಕ ಮತ್ತು ಮಾನಸಿಕ ಶುದ್ದತೆಯನ್ನು ಕಾಪಾಡಿಕೊಳ್ಳುವ ಸಾಧನಗಳು ಎಂದು ನಂಬಿದ್ದರು. ಗಾಂಧೀಜಿಯವರ
ಆಹಾರ ಕ್ರಮವು ಅಹಿಂಸೆ ಮತ್ತು ಸರಳತೆಯ ತತ್ವಕ್ಕೆ
ಹೊಂದಿಕೆಯಾಗಿತ್ತು.
-:ನಿರ್ಭಯತೆ:-
(ಅಭಯ)
ನಿರ್ಭಯ ಎಂದರೆ,
ಧೈರ್ಯ ಮತ್ತು ಸ್ಥೈರ್ಯದಿಂದ ಸವಾಲುಗಳನ್ನು ಎದುರಿಸುವುದು, ಗಾಂಧೀಜಿಯವರ ಈ ತತ್ವದ ಮೂಲಕ, ಬಂಧನ,
ಹಿಂಸಾಚಾರ, ಮತ್ತು ಸಾವನ್ನು ಎದುರಿಸುವ ಇಚ್ಛೆಯನ್ನು ಸ್ಪಷ್ಟಪಡಿಸಿದ್ದರು.
-:ಸಮಾನತೆ:-
(ಸರ್ವೋದಯ)
ಅಸ್ಪೃಷ್ಯತೆ ಮತ್ತು ಜಾತಿ ತಾರತಮ್ಯದ ವಿರುದ್ದ ಗಾಂಧೀಜಿಯವರ ಹೋರಾಟವು
ಈ ಪ್ರತಿಜ್ಞೆಗೆ ಉದಾಹರಣೆಯಾಗಿದೆ. ಸಾಮಾಜಿಕ ಅಂತರವನ್ನು
ನಿವಾರಿಸಿ, ಸಾಮಾಜಿಕ ನ್ಯಾಯವನ್ನು ಒದಗಿಸಲು ಅವಿರತವಾಗಿ
ಶ್ರಮಿಸಿದರು.
-:ಭೂದಾನ:-
ದೈಹಿಕ ದುಡಿಮೆಯ
ಘನತೆಯನ್ನು ಗಾಂಧೀಜಿಯವರು ಬಲ್ಲವರಾಗಿದ್ದರು. ವರ್ಗ ವ್ಯತ್ಯಾಸಗಳನ್ನು ಕಡಿಮೆ ಮಾಡಲು ಅವಿರತ ಶ್ರಮ
ವಹಿಸಿದ್ದರು.
-:ಸ್ವಾವಲಂಭನೆ:-
(ಸ್ವದೇಶಿ)
ಸ್ಥಳೀಯವಾಗಿ ತಯಾರಿಸಿದ
ಉತ್ಪನ್ನಗಳ ಬಳಕೆಯು ಆರ್ಥಿಕ ಸ್ವಾವಲಂಬನೆಯನ್ನು ಉತ್ತೇಜಿಸುತ್ತದೆ. ಬಾರತ ಸ್ವಾತಂತ್ರ್ಯ ಚಳುವಳಿಯ
ಸಮಯದಲ್ಲಿ ಗಾಂದೀಜಿಯವರು ಇಂಗ್ಲೆಂಡಿನ ಸರಕುಗಳನ್ನು ಬಹಿಷ್ಕರಿಸಿದರು.
-:ಸರ್ವಧರ್ಮ
ಸಮನ್ವಯ:-
( ಅಸ್ಪೃಶ್ಯತೆ ನಿವಾರಣೆ)
ಸರ್ವ ಧರ್ಮ ಸಮನ್ವಯದ
ಭಾವದ ಮಹತ್ವವು, ಜಾತಿ ವ್ಯವಸ್ಥೆ ಮತ್ತುಆಳವಾಗಿ ಬೇರೂರಿರುವ ಸಾಮಾಜಿಕ ಅಸಮಾನತೆಯನ್ನು ತೊಡೆದುಹಾಕುವ ಉದ್ದೇಶವನ್ನು ಹೊಂದಿತ್ತು.
ಈ ಪ್ರತಿಜ್ಞೆಗಳನ್ನು,
ತತ್ವಗಳಾಗಿ ದಿನನಿತ್ಯದ ಜೀವನದೊಂದಿಗೆ ಸಂಯೋಜಿಸಿದ ಗಾಂಧೀಜಿಯವರ ಜೀವನವು ಉನ್ನತ ವ್ಯಕ್ತಿತ್ವದ ನಾಗರಿಕರನ್ನಾಗಿ
ರೂಪಿಸಿದವು. ಇವುಗಳು ಕೇವಲ ವೈಯಕ್ತಿಕ ಮಾರ್ಗಸೂಚಿಗಳಾಗಿರದೇ , ನೈತಿಕತೆ ಮತ್ತು ಮಾನವೀಯತೆಯ ಜೊತೆಗೆ
ಆಧ್ಯಾತ್ಮದ ವಿಕಾಸಕ್ಕೆ ಕ್ರಾಂತಿಕಾರಿ ಚೌಕಟ್ಟಾಗಿದ್ದವು.
ಗಾಂಧೀಜಿಯವರ ತತ್ವಗಳೊಂದಿಗೆ
ನನ್ನ ಜೀವನದ ಹಾದಿ
ಪ್ರೈಮರಿ
ಶಾಲೆಯಲ್ಲಿ ಕಲಿಯುತ್ತಿದ್ದಾಗ , ಸ್ವಾತಂತ್ರ್ಯ ದಿನೋತ್ಸವ, ಗಾಂಧಿ ಜಯಂತಿಯ ದಿನದಂದು ನಡೆಯುತ್ತಿದ್ದ
ಭಾಷಣಗಳಲ್ಲಿ ನಾನು ಹೆಚ್ಚಾಗಿ ಗಮನಿಸುತ್ತಿದ್ದ ವಿಷಯವೆಂದರೆ, ಉಪವಾಸ ಸತ್ಯಾಗ್ರಹ ದ ವಿಚಾರ.
ಬಡತನದ ಕುಟುಂಬದಲ್ಲಿ
ಜನಿಸಿದ ನನಗೆ ಎಳೆ ವಯಸ್ಸಿನಲ್ಲಿಯೇ ಉಪವಾಸದ ಪರಿಚಯ
ಮೊದಲೇ ಆಗಿತ್ತು, ಆ ದಿನಗಳಲ್ಲಿ ನನ್ನ ಮಸ್ತಿಷ್ಕದಲ್ಲಿ ನಡೆಯುತ್ತಿದ್ದ ಮಂಥನವೆಂದರೆ,
ಉಪವಾಸಕ್ಕೆ ಇಷ್ಟೊಂದು
ಮಹತ್ವವಿದೆಯೇ , ಹಾಗಿದ್ದರೆ ನಾನು ಮಾಡುವ ಈ ಉಪವಾಸಕ್ಕೆ ಕಾರಣವೇನು? ನಾನು ಯಾವ ಬ್ರಿಟೀಷರನ್ನು ಓಡಿಸಬೇಕಾಗಿಲ್ಲವಲ್ಲ ಎಂದುಕೊಳ್ಳುತ್ತಿದ್ದೆ.
ಆದರೆ ಈ ಒಂದು
ಉಪವಾಸದಿಂದ ಉಪಾಯದಿಂದ ಬ್ರಿಟೀಷರೆ ಮಾತು ಕೇಳುತ್ತಿದ್ದರು ಎಂದರೆ ನನ್ನ ತಂದೆ ತಾಯಿಯು ಸಹ ನನ್ನ ಮಾತು
ಕೇಳುತ್ತಾರೆ ಎನಿಸಿ, ನನ್ನ ಎಷ್ಟೋ ಅಗತ್ಯದ ಸಂದರ್ಭದಲ್ಲಿ
ನನ್ನ ತಂದೆ ಅಥವಾ ತಾಯಿಯಿಂದ ಕೆಲಸ ಮಾಡಿಸಿಕೊಳ್ಳಲು ಈ ಉಪವಾಸವನ್ನೇ ಅಸ್ತ್ರವಾಗಿ ಪ್ರಯೋಗಿಸಿ ಯಶಸ್ವಿಯಾಗುತ್ತಿದ್ದೆ.
ಅರಿಯದ ವಯಸ್ಸಿನಲ್ಲಿಯೇ
ಗಾಂಧೀಜಿಯವರ ವಿಚಾರಧಾರೆಗಳು ನನ್ನ ಜೀವನದಲ್ಲಿ ಪರಿಣಾಮ ಬೀರಲು ಪ್ರಾರಂಭಿಸಿದ್ದವು.
ದಿನಗಳು ಕಳೆದಂತೆ
ಬೆಳೆಯುತ್ತಿರುವ ನನ್ನ ಮನಸ್ಸಿನ ಸುಪ್ತ ಪ್ರಜ್ಞೆಯಲ್ಲಿ ಗಾಂಧೀಜಿಯ ತತ್ವಗಳು ವಿಚಾರದಾರೆಯಾಗಿ ಹರಿದಿದ್ದವು.
ಇದು ಇಂದಿಗೂ ಕೂಡ ನನ್ನ ವ್ಯಕ್ತಿತ್ವ ವಿಕಸನಗೊಳಿಸುವಲ್ಲಿ ಪ್ರತಿ ಕ್ಷಣವೂ ದಾರದೀಪವಾಗಿವೆ.
ಅರಿವಿನ ಕಿರಣವು
ಬೆಳಕನ್ನು ಪಸರಿಸಿದಂತೆಲ್ಲಾ ಜೀವನವು ಬೆಳಗುತ್ತದೆ.
ಧನ್ಯವಾದಗಳು…..
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು