ಕಾರ್ತಿಕ ಮಾಸದಲ್ಲಿ ರಾತ್ರಿಗಳು ದೀರ್ಘವಾಗಿರುತ್ತವೆ....!!!!!!🌙
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾರ್ತಿಕ ಮಾಸವು ಆಂತರ್ಯದ ಬೆಳಕನ್ನು ಬೆಳಗಿಸುವ ಅತ್ಯಂತ ದಿವ್ಯ, ಪರಿಶುದ್ಧ ಯುಗ!!!!!!
ಲೇಖಕಿ:ನಾಗಲಕ್ಷ್ಮಿ ಕೆ. ಎನ್. ದಿನಾಂಕ:೧೯.೧೦.೨೦೨೫.
ಕಾರ್ತಿಕ
ಮಾಸವನ್ನು ಹಿಂದೂ ಪಂಚಾಂಗದಲ್ಲಿ ಅತ್ಯಂತ ಪವಿತ್ರವಾದ, ದೈವೀ ಶಕ್ತಿ ಪ್ರವಹಿಸುವಿಕೆಯು ಅತಿರಥವಾಗಿರುವ ಮತ್ತು
ತಪಸ್ಸಿಗೆ ಯೋಗ್ಯವಾದ ಮಹಾದೈವಿಕ ಮಾಸವೆಂದು ಪರಿಗಣಿಸಲಾಗಿದೆ.
ವಿಶೇಷವಾಗಿ
ಶರದೃತುವಿನ ಅಂತ್ಯದೊಂದಿಗೆ ಶಿಶಿರ ಋತುವಿನ ಆರಂಭದ ಕಾಲವೇ ಈ ಕಾರ್ತಿಕ ಮಾಸ. ಈ ಸಮಯದಲ್ಲಿ ಪ್ರಕೃತಿಯಲ್ಲಿಯೂ,
ಮಾನವನ ಮನಸ್ಸಿನಲ್ಲಿಯೂ ಮತ್ತು ದೈವಿಕತೆಯ ಚಕ್ರದಲ್ಲಿಯೂ ಅನೇಕ ಬದಲಾವಣೆಗಳು ಸಂಭವಿಸುತ್ತವೆ.
ಈ ಮಹಾಮಾಸದಲ್ಲಿನ ರಾತ್ರಿಗಳು ದೀರ್ಘವಾಗಿರುವುದರಿಂದ, ಧ್ಯಾನ
ತಪಸ್ಸಿಗೆ ಸೂಕ್ತವಾದ ಕಾಲ ಎಂದೇ ಹೇಳಬಹುದು.
🌙 ಈ ಕಾರ್ತಿಕ
ಮಾಸವು ದೇವರ
ಜಾಗೃತಿ, ಭಕ್ತರ ಶ್ರದ್ಧೆ ಮತ್ತು ಮಂದಿರಪುರಾಣಗಳ
ಆಳದಿಂದ ಹೊರಹೊಮ್ಮಿದ ಪವಿತ್ರ ಯುಗ.
ಕಾರ್ತಿಕ
ಮಾಸವನ್ನು ವಿಷ್ಣುವಿನ ಅತ್ಯಂತ ಪ್ರೀತಿಯ ಮಾಸ ಎಂದೇ ಹೇಳಲಾಗುತ್ತದೆ. ಈ ಸಮಯದಲ್ಲಿ ನದಿ ಸ್ನಾನ, ದೀಪ
ಬೆಳಗಿಸುವುದು ಮತ್ತು ತುಳಸಿ ಸೇವನೆಯಿಂದ ದೊರೆಯುವ
ಫಲವು ಕೋಟಿ ಯಜ್ಞಗಳನ್ನ ನೇರವೇರಿಸಿದ ಫಲಕ್ಕೆ ಸಮಾನ ಮತ್ತು ಮಾಡಿದ ಅಷ್ಟೂ ಪಾಪಗಳು ನಿರ್ಮೂಲವಾಗುತ್ತವೆ
ಎಂದು ನಂಬಲಾಗಿದೆ.
ಕಾರ್ತಿಕಮಾಸದಲ್ಲಿ
ಪ್ರತಿದಿನ ದೀಪೋತ್ಸವ ಮಾಡುವುದರಿಂದ, ಅಜ್ಞಾನದ ಅಂಧಕಾರ ನಿವಾರಣೆಯಾಗುತ್ತದೆ ಮತ್ತು ದೇಹ ಮನಸ್ಸು ಪ್ರಾಣಗಳು ಶುದ್ಧವಾಗುತ್ತವೆ.
ಭಾರತೀಯ
ಹಿಂದೂ ಧರ್ಮದ ಹೃದಯದಲ್ಲಿ
ನಾಲ್ಕು ಯುಗಗಳಷ್ಟು ಆಳಕ್ಕೆ ಹೋಗುವುದು ಎಂದಾದರೆ, ಆ ಸಮಯದಿಂದಲೇ ಕಾರ್ತಿಕ
ಮಾಸವು ನಮ್ಮ
ಪೌರಾಣಿಕ ಸಂಸ್ಕೃತಿಯ ಅತ್ಯಂತ ಅ ವರ್ಣನೀಯ ತೇಜೋಪುಂಜದಿಂದ ಕೂಡಿದ
ಅಧ್ಯಾಯ. ಈ ತಿಂಗಳು ಶರದೃತುವಿನ
ಸಾತ್ವಿಕ ಶಕ್ತಿ, ದೈವಿಕತೆಯ ತೇಜಸ್ಸು, ತಪಸ್ಸಿನ ಶಾಂತಿ ಮತ್ತು ಭಕ್ತಿಯ ಜ್ಯೋತಿ ಎಲ್ಲವೂ ಒಟ್ಟಾಗಿ ಮೇಳೈಸಿದ ಭೂಲೋಕದ ಸ್ವರ್ಗ.
ಪುರಾಣಗಳು
ಹೇಳುವಂತೆ, ವಿಷ್ಣು ನಿದ್ರೆಯಿಂದ ಜಾಗೃತಗೊಳ್ಳುವುದು, ಶಿವನು ತಪಸ್ಸಿನಲ್ಲಿ ಲೀನವಾಗಿರುವುದು, ಲಕ್ಷ್ಮೀ–ತುಳಸಿ–ಗಂಗಾ—ಈ ತ್ರಿದೇವಿಯರು
ಭೂಮಿಯ ಮೇಲೆ ಹೆಚ್ಚಿಸಿದ ಸಂಭ್ರಮವನ್ನು
ತೋರಿಸುವುದು, ಇವೆಲ್ಲವೂ ಈ ಕಾರ್ತಿಕದ
ವಾತಾವರಣವನ್ನು ಅಪೂರ್ವವಾಗಿ ಪವಿತ್ರಗೊಳಿಸುತ್ತವೆ.
ವಿಷ್ಣುವಿನ
ದಾಮೋದರ ಲೀಲೆ
🔱 ಕಾರ್ತಿಕ
ಮಾಸವು ಸೃಷ್ಟಿಚಕ್ರದಲ್ಲಿ ಸ್ಥಾನ ಪಡೆದ ಪರಮ ಪಾವನಯುಗ,ಹಳೆಯ ಪುರಾಣಗಳಲ್ಲಿ ಪ್ರಮುಖವಾದ ಪದ್ಮಪುರಾಣ, ಮತ್ಸ್ಯಪುರಾಣ, ವಾಮನಪುರಾಣ, ಸ್ಕಂದಪುರಾಣ, ಅಗ್ನಿಪುರಾಣ ಈ ಎಲ್ಲದರಲ್ಲೂ ಕಾರ್ತಿಕ ಮಾಸಕ್ಕೆ ವಿಶೇಷ ಅಧ್ಯಾಯಗಳಿವೆ.
ಪದ್ಮಪುರಾಣ
ಹೇಳುವಂತೆ:
“ಸರ್ವಮಾಸೇಷು ಕಾರ್ತಿಕಃ ಪುಣ್ಯಕರ್ಮಪ್ರದಃ ಪರಃ”
ಪ್ರಕೃತಿ ಆಡಳಿತವಿರುವ ಈ ಎಲ್ಲ
ತಿಂಗಳಲ್ಲಿ ಕಾರ್ತಿಕ ಮಾಸ ಅತ್ಯಂತ ಪುಣ್ಯದಾಯಕವಾಗಿದೆ.
🕉 ದಾಮೋದರ ಲೀಲೆಯ ಪೌರಾಣಿಕ ತತ್ವವು ಭಕ್ತಿಗೆ ಬಲ ಹೆಚ್ಚು ಎಂದು ಭೋದಿಸುತ್ತದೆ. ಕಾರ್ತಿಕ ಮಾಸದಲ್ಲಿ ಪ್ರತಿದಿನ ಬೆಳಗ್ಗೆ, ಸಂಜೆ ಮನೆಗಳಲ್ಲಿ ಕೇಳಿಬರುವ
“ದಾಮೋದರಾಷ್ಟಕ” ಕವಿತೆಯ ಮೂಲ ಶ್ರೀಮದ್ಭಾಗವತ.
ಬಾಲಕೃಷ್ಣನು
ಗೋಕುಲದಲ್ಲಿ ಬೆಳೆಯುತ್ತಾ ತನ್ನ ಕುಟಿಲ ಬಾಲ್ಯ ಲೀಲೆಗಳಿಂದಲೇ ನೆರೆಹೊರೆಯಲ್ಲಿ ಸಂಭ್ರಮವನ್ನು ದುಪ್ಪಟ್ಟಾಗಿಸುತ್ತಿದ್ದ.
ಒಮ್ಮೆ, ಬಾಲಕೃಷ್ಣ ಯಶೋದಾಳ ಮಡಿಲೇರಿ ಹಾಲು ಕುಡಿಯುತ್ತಿದ್ದಾಗ, ಒಲೆಯ ಮೇಲೆ ಉಕ್ಕಿ ಹರಿಯುತ್ತಿದ್ದ
ಹಾಲನ್ನು ಉಳಿಸಲು, ಯಶೋದ ಕೃಷ್ಣನನ್ನು ಬಿಟ್ಟು ಓಡಿದ್ದಳು. ತನ್ನ ಮುದ್ದು ಅಮ್ಮ ತನ್ನನ್ನು ಬಿಟ್ಟು ಹಾಲನ್ನು ಉಳಿಸಲು
ಓಡಿದ್ದು ಕೃಷ್ಣನಿಗೆ ಸಣ್ಣದಾಗಿ ಕೋಪ ತರಿಸಿತ್ತು.
ಅದೇ
ಕೋಪದಿಂದಲೇ ಕೃಷ್ಣ ಮನೆಯಲ್ಲಿದ್ದ ಗಡಿಗೆ ಪೂರ್ತಿ ಬೆಣ್ಣೆಯನ್ನು ತಿಂದು ಹಾಕುತ್ತಾನೆ, ಮತ್ತು ಗೋಪಿಕೆಯರ ಮನೆಗಳಲ್ಲಿ ಬೆಣ್ಣೆ
ತಿಂದು ಗಡಿಗೆಗಳನ್ನು ಒಡೆದು ಹಾಕಿ,ನೆರೆಮನೆಯ ಮಕ್ಕಳೆಲ್ಲರಿಗೂ ಬೆಣ್ಣೆ ತಿನ್ನಲು ಕೊಡುತ್ತಾನೆ. ಇದನ್ನು
ಕಂಡ ಯಶೋಧಾ ಅವನನ್ನು ಹಿಡಿಯಲು ಹಿಂದೆ ಹಿಂದೆಯೇ ಓಡುತ್ತಾಳೆ. ಕೃಷ್ಣ ತನ್ನ ತಾಯಿಗೆ ದೊರೆಯದೇ ಪುಟ್ಟ ಪುಟ್ಟ ಕಾಲುಗಳಿಂದಲೇ ಬೇಗ ಓಡಿ ಬಿಡುತ್ತಾನೆ. ಯಶೋದೆಗೆ ತನ್ನ ತಾಯಿ ಪ್ರೀತಿಯೊಂದಿಗೆ ಕೋಪವೂ ಸೇರಿ, ಕೃಷ್ಣನನ್ನು
ಹಿಡಿದು ಹಗ್ಗದಿಂದ ಕಟ್ಟಲು ನೋಡುತ್ತಾಳೆ. ಹಗ್ಗದಿಂದ ಕೃಷ್ಣನನ್ನು ಮರದ ದಿಮ್ಮಿಗೆ ಕಟ್ಟಲು ನೋಡುತ್ತಾಳೆ,
ಹಗ್ಗವು ತುಂಡವಿರುವುದು ಕಂಡು ಮತ್ತೊಂದು ಹಗ್ಗ ತರುತ್ತಾಳೆ, ಆದರೆ ಹಗ್ಗವು ಸಾಲದೇ ಹೋಗುತ್ತದೆ, ಮತ್ತೆ
ಮತ್ತೆ ಹಗ್ಗ ಜೋಡಿಸುವ ಪ್ರಯತ್ನ ಮಾಡಿ,ಯಶೋದೆ ಸೋಲುತ್ತಾಳೆ. ಬಾಲಕೃಷ್ಣನು ತನ್ನ ಯೋಗಮಾಯೆಯನ್ನು ಕಂಡು ನಗುತ್ತಾನೆ.ಮತ್ತು ತಾಯಿ ಯಶೋಧಳ ಪ್ರೀತಿಯ
ಶ್ರಮವನ್ನು ಕಂಡು ಮರುಗಿ ತನ್ನ ಮಾಯೆಯನ್ನು ಹಿಂತೆಗೆದುಕೊಳ್ಳುತ್ತಾನೆ.
ಹಗ್ಗದಿಂದ
ದಿಮ್ಮಿಗೆ ಕಟ್ಟಲ್ಪಟ್ಟ ಕೃಷ್ಣನು, ಮನೆಯಿಂದ ದಿಮ್ಮಿಯನ್ನು
ಎಳೆಯುತ್ತಲೆ ಹೊರಹೋಗುತ್ತಾನೆ. ಹೊರಗೆ ಎರಡು ಭಂಡಾರವೃಕ್ಷಗಳ
ನಡುವೆ ಬಾಲಕೃಷ್ಣನು ನಡೆದು ಹೋದಾಗ, ಭಾರದಿಂದ ಎರಡೂ ವೃಕ್ಷಗಳು ಭೂಮಿಗೆ ಬಿದ್ದು ಹೋಗುತ್ತವೆ. ಆ ವೃಕ್ಷಗಳಲ್ಲಿದ್ದ
ಶಾಪಗ್ರಸ್ತ ಕುಬೇರನ ಮಕ್ಕಳು ಕೃಷ್ಣನ ಸ್ಪರ್ಶದಿಂದ ಶಾಪಮುಕ್ತರಾಗಿ ತಮ್ಮ ಸ್ವರೂಪಕ್ಕೆ ಮರಳಿ ಕೃಷ್ಣನಿಗೆ ಕೃತಜ್ಞತೆಯನ್ನು ಅರ್ಪಿಸಿ
ಸ್ವರ್ಗಕ್ಕೆ ತೆರಳುತ್ತಾರೆ. ಇದೇ ಕೃಷ್ಣನ ದಾಮೋದರ ರೂಪ.
ದಾಮ-
ಹಗ್ಗ,
ಉದರ-
ಹೊಟ್ಟೆ,
ಹಗ್ಗದಿಂದ
ಹೊಟ್ಟೆಯ ಬಾಗಕ್ಕೆ ಕಟ್ಟಲ್ಪಟ್ಟವನು. ಭಕ್ತಿಯ ಬಂಧನಕ್ಕೆ ತಾನೇ ಬಂಧಿತನಾಗುವ ಪರಮಾತ್ಮ. ತನ್ನ ಮಹಿಮೆಯಿಂದ
ತಾಯಿ ಯಶೋಧೆಯ ಪ್ರೀತಿಯನ್ನು ತಣಿಸಿದ ಮಧುರ ಕ್ಷಣ.
ತುಳಸಿ
ವಿವಾಹ
ತುಳಸಿ
ವಿವಾಹವು, ಕಾರ್ತಿಕ ಮಾಸದ ಅತ್ಯಂತ ಪವಿತ್ರ,
ಮಧುರ ಮತ್ತು ದೈವಾನುಗ್ರಹಭರಿತ, ದೇವರೊಂದಿಗೆ ಭಕ್ತಿಯ ಏಕೀಕರಣದ ಅತ್ಯಂತ ಸುಂದರ ಸಂಕೇತ.
ಕಾರ್ತಿಕದ
ಶುದ್ಧ
ದ್ವಾದಶಿಯಂದು ವೈಕುಂಠದಲ್ಲಿ, ನಾರಾಯಣನು ತುಳಸಿಯನ್ನು ವರಿಸುವುದಾಗಿ
ನೇರವಾಗಿ ದಿವ್ಯ ಘೋಷಣೆ ನಡೆಯುವ ದಿನ.
ಹಿಂದೂ
ಪರಂಪರೆಯಲ್ಲಿ “ದೇವರ ವಿವಾಹ” ಎಂದು
ಕರೆಯಲ್ಪಡುವ ಅಪರೂಪದ ಮಹೋತ್ಸವ ಈ ತುಳಸಿ ವಿವಾಹ.
ತುಳಸಿ
ದೇವಿ ಮೂಲರೂಪದಲ್ಲಿ, ವೃಷಧನುವಿನ ಪುತ್ರಿ, ವೃಂದಾ. ಈಕೆ ಒಬ್ಬ ಪವಿತ್ರ ತಪಸ್ವಿನಿ, ಪತಿಯೆಡೆಗೆ ಅಪಾರ
ಪ್ರೀತಿ ಹೊಂದಿದ್ದ ದೇವಕನ್ಯೆ.
ವೃಂದಾ ಜಲಂಧರನ ಪತ್ನಿಯಾಗಿ ತನ್ನ ಪಾತಿವ್ರತ್ಯ ತಪಸ್ಸಿನಿಂದ ಅಪಾರ ಪ್ರಸಿದ್ಧಳಾಗಿದ್ದಳು. ತನ್ನ ಪಾತಿವ್ರತ್ಯದ ಶುದ್ಧ
ಭಕ್ತಿಯಿಂದ, ಜಲಂಧರನಿಗೆ ಅನುಗ್ರಹರೂಪವಾಗಿ, ದೇವರು ಮತ್ತು ದೈತ್ಯ ರೂಪಗಳು ತಡೆಯಲಾರದ ಮಟ್ಟಿಗೆ ಅಪಾರ
ಶಕ್ತಿ ಕರುಣಿಸಿದ್ದಳು.
ಯುದ್ಧದಲ್ಲಿ
ಜಲಂಧರನು ದೇವತೆಯರನ್ನೂ, ದೇವೇಂದ್ರನನ್ನೂ ಮಣಿಸಿ, ಎಲ್ಲಾ ಲೋಕಗಳನ್ನು ದಿಗ್ಭ್ರಮೆಗೊಳಿಸಿದ್ದ. ಆಗ ಶ್ರೀ ವಿಷ್ಣುವೇ ಈ ಯುದ್ಧಕ್ಕೆ ತೆರಳಬೇಕಾಯಿತು. ಕಾರಣ ಜಲಂಧರನ
ಈ ಮಹಾದೈತ್ಯ ಶಕ್ತಿ ಆತನ ಪತ್ನಿ ವೃಂದೆಯ ಅಚಲ ಪಾತಿವ್ರತ್ಯಯಿಂದ ಬಂದದ್ದು. ಮತ್ತು
ಆ ಪಾತಿವ್ರತ್ಯ ಮುರಿಯದಿದ್ದರೆ ಜಲಂಧರನಿಗೆ ಮರಣ ಸಾಧ್ಯವಿರಲಿಲ್ಲ.
ವೃಂದಾ
ದೇವಿಯ ತಪಸ್ಸನ್ನು ಅಂತಃಕರಣದಲ್ಲಿ ತಿಳಿದಿದ್ದ ಮಹಾವಿಷ್ಣು, ಭೂಮಿ, ಸ್ವರ್ಗ, ಮತ್ತು ಲೋಕರಕ್ಷಣೆಗಾಗಿ
ಒಂದು ದೈವ ಲೀಲೆಗೆ ಮುಂದಾದನು.
ಒಮ್ಮೆ
ದೇವತೆಗಳ ಮೇಲೆ ಜಲಂಧರ ಯುದ್ಧಕ್ಕೆ ತೆರಳಿದಾಗ, ವಿಷ್ಣು
ಸ್ವತಃ ಜಲಂಧರನ ರೂಪದಲ್ಲಿಯೇ ವೃಂದಾಳ ಮುಂದೆ
ಬಂದನು. ಅವಳು ವಿಷ್ಣುವಿನ ಜಲಂಧರನ ರೂಪದಲ್ಲಿದ್ದ ‘ಪತಿಯನ್ನು’ ನೋಡಿ ಭಕ್ತಿಯಿಂದ ಪಾದಸ್ಪರ್ಶ ಮಾಡಿ
ಪೂಜಿಸಿದಳು.
ಆ
ಕ್ಷಣದಲ್ಲಿಯೇ, ವೃಂದಾದೇವಿಯ ಪಾತಿವ್ರತ್ಯವು, ವಿಷ್ಣುವನ್ನು ಮರೆಮಾಚಿದ ಜಲಂಧರನನ್ನು ಪತಿಯೆಂದು ಭಾವಿಸಿದಾಗ,
ಅಜ್ಞಾತವಾಗಿ ಅಪವಿತ್ರವಾಯಿತು. ಇದು ಸ್ವತಃ
ವಿಷ್ಣುವಿನ ದೈವಿಕ ಯೋಗಮಾಯೆಯ ಲೀಲೆ.
ಈ
ಪಾತಿವ್ರತ್ಯ ಮುರಿದ ಕ್ಷಣವೇ ಜಲಂಧರ ಯುದ್ಧಭೂಮಿಯಲ್ಲಿ ಬಲಹೀನನಾಗಿ, ವಿಷ್ಣುವಿನ ಚಕ್ರದಿಂದ ಹತನಾದನು.
ವೃಂದಾಳು
ಈ ವಿಚಾರ ತಿಳಿದು, ಅವಳ ಹೃದಯದಲ್ಲಿ ತೀವ್ರ ವ್ಯಥೆಯಾಯಿತು.
ತಾನು ಪೂಜಿಸಿದ ನಾರಾಯಣನ ಮೇಲಿನ ಅವಳ ಪ್ರೀತಿ → ಗೌರವ →
ಭಕ್ತಿ, ಇವೆಲ್ಲವೂ ಒಂದೇ ಕ್ಷಣದಲ್ಲಿ ವಿಚಿತ್ರ ಮಿಶ್ರ ಭಾವಗಳಲ್ಲಿ ಒಂದಾಗಿ, ವಿಷ್ಣುವಿಗೆ
ಶಾಪಕೊಟ್ಟಳು.
ನೀನು
ನಿನಗೆ ಪ್ರಿಯವಾಗಿರುವ ಲಕ್ಶ್ಮಿಯೂ ಈ ಭೂಮಿಯಲ್ಲೇ ಇಬ್ಬರೂ ಯಾರದೋ ಸಂಗಾತಿಗಳಾಗಿ ಮರಳಿ ಜನ್ಮ ಪಡೆದು
ಮರಣ–ಜನನ ಭೋಗಿಸಬೇಕು.”
ವಿಷ್ಣು
ವಿನಯದಿಂದಲೇ ವೃಂದಾಳ ಶಾಪವನ್ನು ಸ್ವೀಕರಿಸಿದನು. ಇದಾದ ನಂತರ ವೃಂದಾದೇವಿಯು ಅಗ್ನಿಸಮಾಧಿಯಲ್ಲಿ ಸಮಾಪ್ತಳಾದಳು. ಬ್ರಹ್ಮ ಲೋಕಾದಿ
ದೇವತೆಗಳು ಅವಳ ತಪಸ್ಸಿನ ಶಕ್ತಿ, ಶುದ್ಧತೆಯನ್ನು ನೋಡಿ ಶಾಪವನ್ನು ಪರಿವರ್ತಿಸುವ ಆಶಯದಿಂದ ಪ್ರಾರ್ಥಿಸಿದರು.
ವೃಂದಾಳ
ದಿವ್ಯ–ಶರೀರವು ದಹಿಸಿ, ಅವಳ ಹೃದಯದ ಪವಿತ್ರ ಸತ್ವ
ತುಳಸಿ ವೃಕ್ಷವಾಗಿ ಭೂಮಿಯ ಮೇಲೆ ಸ್ಥಾಪಿತವಾಯಿತು.
“ಇನ್ನುಮುಂದೆ ನಾರಾಯಣನ ಪೂಜೆಯಲ್ಲಿ ತುಳಸಿ ಇಲ್ಲದೆ
ಯಾವುದೂ ಸ್ವೀಕರಿಸಲಾರನು.”
“ತುಳಸಿಯ
ಎಲೆಗಳನ್ನು ದಾನ ಮಾಡಿದವನಿಗೆ ಯುಗಯುಗಾಂತರಗಳ ಪುಣ್ಯ.”
“ತುಳಸಿಯ ಒಂದು ಎಲೆ ವಿಷ್ಣುವಿಗೆ ಸಾವಿರ ರತ್ನಗಳ ಸಮಾನ,”
ಎಂದು ಬ್ರಹ್ಮನು ಇಡೀ ಬ್ರಹ್ಮಾಂಡಕ್ಕೆ ಘೋಷಿಸಿದನು.
ವಿಷ್ಣುವೂ
ಸಹ ವೃಂದಾಳಿಗೆ, “ನೀನು ನನಗೆ ಅತ್ಯಂತ ಪ್ರಿಯಳು.
ಕಾರ್ತಿಕ ಮಾಸದ ದ್ವಾದಶಿಯಲ್ಲಿ ನಾನು ನಿನ್ನನ್ನು ವಿವಾಹವಾಗುತ್ತೇನೆ.” ಎಂದು ಮಾತು ಕೊಟ್ಟನು.
ಈ
ಕಾರಣದಿಂದಲೇ ತುಳಸಿ, ಅಂದರೆ ವೃಂದಾ ಅವರ ವಿವಾಹವನ್ನು ತುಳಸಿ ವಿವಾಹವೆಂದು ಸಂಪ್ರದಾಯದಲ್ಲಿ ಆಚರಿಸಲಾಗುತ್ತದೆ.
ಪಾತಿವ್ರತ್ಯ,
ತಪಸ್ಸು, ಶುದ್ಧತೆ , ಭಕ್ತಿ ಯಾವ ರೂಪದಲ್ಲಿದರೂ ದೇವರಿಗೆ ನೈವೇದ್ಯವೆ.
ಕೆಲವೊಮ್ಮೆ
ದೇವರೂ ಕರ್ತವ್ಯಕ್ಕಾಗಿ ಕಠಿಣ ನಿರ್ಧಾರ ಮಾಡುತ್ತಾರೆ. ಇದರಿಂದ ಶಾಪವೂ ವರವಾಗಬಹುದು.
ತ್ರಿಪುರಾಸುರ
ಸಂಹಾರ
ಭಾರತದ
ಪುರಾಣ ಪರಂಪರೆಯಲ್ಲಿ, ಅಸುರ–ದೇವ ಸಂಘರ್ಷಗಳು ಕೇವಲ ಯುದ್ಧಕಥೆಗಳಲ್ಲ; ಅವು ಮಾನವನೊಳಗಿನ ಅಹಂಕಾರ,
ಕಾಮ, ಕ್ರೋಧ, ಮಮಕಾರಗಳ ರೂಪಕಗಳು. ಈ ಪೈಕಿ ಅತಿ ಅಮೋಘವಾದ ಘಟನೆ ತ್ರಿಪುರಾಸುರ ಸಂಹಾರ, ಕೈಲಾಸದ ಶಿವನ ಕರ್ತೃ-ಭಾವ, ಧರ್ಮಪಾಲನೆಯ ಮತ್ತು ನಿರಹಂಕಾರ ಸತ್ಯಜ್ಞಾನಿಯ
ರೂಪದ ಶಾಶ್ವತ ಚಿಹ್ನೆಯಾಗಿದೆ.
🔱 ತಾರಕಾಸುರನ ಮೂವರು ಪುತ್ರರಾದ, ತಾರಕಾಕ್ಷ, ವಿದ್ಯುನ್ಮಾಲಿ, ಕಮಲಾಕ್ಷರು
ಅಸುರಕುಲ ಬಲದ ಸಂಕೇತಗಳಾಗಿದ್ದರು. ಇವರ ತೀವ್ರವಾದ ತಪಸ್ಸು ಬ್ರಹ್ಮನನ್ನೇ ಸಂತೋಷಪಡಿಸಿತು.
ತಪಸ್ಸಿನ ಫಲವಾಗಿ ಅವರು ಕೇಳಿದ ವರವೇ ಈ ಕಥೆಯ ತಿರುವು.
“ನಾವು
ನಿರ್ಮಿಸುವ ಮೂರು ಲೋಕಗಳನ್ನು ಒಂದೇ ಸಮಯದಲ್ಲಿ, ಸರಿಯಾದ ಸಂಧಿ ಸಮಯದಲ್ಲಿ, ಒಂದೇ ಬಾಣದಿಂದ ನಾಶ ಮಾಡಿದಲ್ಲಿ
ಮಾತ್ರ ನಮಗೆ ಮರಣವಾಗಲಿ.” ಎಂದು ವರ ಬೇಡಿದರು.
ಬ್ರಹ್ಮನು,
ಈ ಅಸುರರ ತಪಸ್ಸಿನ ಶಕ್ತಿಯನ್ನು ಗೌರವಿಸಿ, ವರ ನೀಡಿ ತ್ರಿಪುರ ಲೋಕಗಳ ಸೃಷ್ಟಿಗೆ ಅನುಮತಿ ನೀಡಿದನು.
🌌 ತಾರಕಾಸುರನ ಮೂವರು ಪುತ್ರರು ಸೇರಿ ನಿರ್ಮಿಸಿದ ಮೂರು ಲೋಕಗಳು, ಚಲಿಸುವ ಬೃಹತ್ ನಕ್ಷತ್ರ ಕೋಟೆಗಳಾಗಿದ್ದವು.
ಮಯ
ದಾನವನಿಂದ ನಿರ್ಮಿಸಲ್ಪಟ್ಟ ಈ ಮೂರು ಲೋಕಗಳು, ಬೆಳ್ಳಿ,
ಬಂಗಾರ ಮತ್ತು ಕಬ್ಬಿಣದ ಕೋಟೆಗಳು ಆಕಾಶಮಾರ್ಗದಲ್ಲಿ
ಚಲಿಸುವ ಮಹಾ ನಗರಗಳು.
ಈ
ಮೂರು ಲೋಕಗಳು ಜೊತೆಯಾಗುವುದು ದುರ್ಲಭ. ಸಾವಿರಾರು ವರ್ಷಗಳಲ್ಲಿ ಒಮ್ಮೆ ಮಾತ್ರ.
ಇವುಗಳು ಒಟ್ಟುಗೂಡಿದ ಶಕ್ತಿ ದೇವತೆಗಳಿಗೆ ಎದುರಾಗಲೆತ್ನಿಸಿತು.
ತ್ರಿಪುರಾಸುರರು,
ಆರಂಭದಲ್ಲಿ ನಿಷ್ಠಾವಂತರಾಗಿದ್ದರೂ, ಅಧಿಕಾರ-ಅಹಂಕಾರ-ನಿರಂಕುಶತ್ವ ಅವರ ಮನಸ್ಸನ್ನು ಹಿಡಿದು ಆಳಲ್ಪಟ್ಟವು.
ದೇವತೆಗಳು ಕರ್ಮಶಕ್ತಿಯಿಂದ ದುರ್ಬಲಗೊಂಡರು; ಯಜ್ಞ-ದಾನ-ಧರ್ಮಗಳು
ಕುಗ್ಗಿಹೋದವು. ಲೋಕಚಕ್ರ ಅಸ್ಥಿರವಾಯಿತು.
ಈ
ಬ್ರಹ್ಮಾಂಡದ ಏರು ಪೇರನ್ನು ಸ್ಥಿರಗೊಳಿಸಲು, ದೇವತೆಗಳು, ಬ್ರಹ್ಮ ಮತ್ತು ವಿಷ್ಣುರಲ್ಲಿ ಅರಿಕೆ ಮಾಡಿಕೊಂಡರು.
ಈ ಸಮಸ್ಯೆಗೆ ಪರಿಹಾರವು ಕೇವಲ ಶಿವನಲ್ಲಿ ಮಾತ್ರ ದೊರೆಯುವುದೆಂದು, ನಾರಾಯಣ ಮತ್ತು ಸೃಷ್ಠಿಕರ್ತನಾದ
ಬ್ರಹ್ಮದೇವರು ಸೂಚನೆ ನೀಡಿದರು. ಆಗ ದೇವತೆಗಳು
ಶಿವನ ಆರಾಧನೆಯಲ್ಲಿ ತೊಡಗಿ ಕೊಂಡರು.
ಬ್ರಹ್ಮಾಂಡದ
ಶಸ್ತ್ರಸಿದ್ಧತೆಯೊಂದಿಗೆ ಶಿವನು ತಕ್ಷಣ ಯುದ್ಧಕ್ಕೆ ಸಿದ್ಧನಾಗಲಿಲ್ಲ; ಏಕೆಂದರೆ ಅವನಿಂದ ಉದಯವಾಗುವ
ಶಕ್ತಿ, ದಿವ್ಯ ಸಮಯ-ಯುಕ್ತಿ, ಕರ್ಮಸಮತೆಯೊಂದಿಗೆ ಜೋಡಿಸಬೇಕಾಗಿತ್ತು.
ದೇವತೆಗಳು
ನಿರ್ಮಿಸಿದ, ಸೂರ್ಯನು ರಥವಾಗಿ, ಚಂದ್ರನು ರಥದ ರಕ್ಷಕನಾಗಿ, ವಿಷ್ಣುವು ಬಾಣವಾಗಿ, ಅಗ್ನಿ ತಂತಿಗಳಾಗಿ
ವ ಹಾಗೂ ವಾಯುು ಧೂರ್ತನಾಗಿ, ಹಿಮಾಲಯವು ಧನುಸ್ಸು
ಆಗಿ ದಿವ್ಯ ಅಸ್ತ್ರವೊಂದು ತಯಾರಾಯಿತು.
ಸಹಸ್ರಾವಧಿಯ
ನಿರೀಕ್ಷೆಯ ನಂತರ, ಮೂರು ಲೋಕಗಳು ಒಂದಾಗಿ ಸರಳ ರೇಖೆಯಲ್ಲಿ ನಿಂತವು. ಇದು ಒಂದು ಬ್ರಹ್ಮಾಂಡೀಯ ಕ್ಷಣ
ಇದೇ ಮಹಾಮುಹೂರ್ತ.
ಶಿವನು
ಆ ಕ್ಷಣವನ್ನೇ ಭೇದಿಸಲು ಬಿಲ್ಲಿನ ತಂತಿಯನ್ನು ಎಳೆದನು.
ವಿಷ್ಣು ಎಂಬ ಬಾಣ, ಸೂರ್ಯ-ಚಂದ್ರರ ಪ್ರಭೆಯಿಂದಾಲಂಕೃತವಾಗಿ, ನಿಖರವಾಗಿ ತ್ರಿಪುರಗಳಿಗೆ ಹಾರಿತು.
ಬಾಣ
ತ್ರಿಪುರಗಳಿಗೆ ತಾಗಿದ ಕ್ಷಣ, ಬ್ರಹ್ಮಾಂಡ ಕಂಪಿಸಿದ ಕ್ಷಣ, ಆಕಾಶದಲ್ಲಿ ಅಗ್ನಿ ಜ್ವಾಲೆ,
ದಶೆ ದಿಕ್ಕುಗಳಲ್ಲಿ ನಾದ, ಬ್ರಹ್ಮಾಂಡಾದಿ
ಲೋಕಗಳಲ್ಲಿ ಧರ್ಮದ ಪುನಶ್ಚೇತನ.
ಈ
ಸಂಹಾರ ಕೇವಲ ಅಸುರರ ನಾಶವಲ್ಲ; ಬದಲಾಗಿ ಅಹಂಕಾರ,
ದುರುದ್ದೇಶ, ಇಂದ್ರಿಯದ ಅತಿರೇಕ, ಮತ್ತು ಅಧಿಕಾರದ ಅಂಧತ್ವದಂತಹ ಅಸುರತತ್ತ್ವಗಳ ನಾಶ.
ಪರಮೇಶ್ವರನು
ತ್ರಿಪುರಾಸುರರ ಆತ್ಮಗಳನ್ನು ಪರಮಶಿವತತ್ತ್ವದಲ್ಲಿ ಲೀನ ಮಾಡುವ ಕರುಣೆಯನ್ನು ಪ್ರದರ್ಶನ ಮಾಡಿದರು
ಇದನ್ನೇ ತ್ರಿಪುರಾಸುರೋತ್ತರ “ಉದ್ಧಾರ” ಎಂದು ಕರೆಯಲಾಗುತ್ತದೆ.
ಒಳಜೀವನದಲ್ಲಿ
ಒಂದು ಒಳ ಬೆಳಕು ಕಾಣಲು, ಒಂದು ಜ್ಞಾನಶಕ್ತಿ ಪಡೆಯಲು, ಒಂದು ಮಹಾಸಂಧಿ ಸಾಕು…ಆಗ
ದಶಕಗಳ ಅಂಧಕಾರ ಕ್ಷಣಾರ್ಧದಲ್ಲಿ ಹುದುಗಿ ಹೋಗುತ್ತದೆ.
ಈ
ಘಟನೆಯು ಕಾರ್ತಿಕ ಪೌರ್ಣಮಿಯ, ಜ್ಯೋತಿ, ದೀಪೋತ್ಸವ, ಅಂತರಂಗದ ಬೆಳಕು
ಎಂದರೆ ಆಧ್ಯಾತ್ಮಿಕ ಸಮೃದ್ಧಿಯ ಚಿಹ್ನೆಯಾಗಿದೆ.
ಭಾರತದ
ಎಲ್ಲೆಡೆ ಈ ದಿನ ಶಿವನಿಗೆ ದೀಪಾರಾಧನೆ, ಸ್ನಾನ-ದಾನ, ಜಪ-ಧ್ಯಾನ
ಪೂರ್ಣ ಭಕ್ತಿಯಿಂದ ಮಾಡಲಾಗುತ್ತದೆ.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು