✍️ “ಆ ಪುಸ್ತಕ ಮಾತನಾಡಿತೇ?”............
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಲೇಖಕಿ:ನಾಗಲಕ್ಷ್ಮಿ ಕೆ. ಎನ್ ದಿನಾಂಕ: ೧೧.೧೦.೨೦೨೫.
🌾 “ಆ ಪುಸ್ತಕ ಮಾತನಾಡಿತೇ?”
– ಮೌನ, ಓದು, ಮತ್ತು ಆತ್ಮಜ್ಞಾನವನ್ನು
ಸೇರುವ ಒಂದು ಜ್ಞಾನ ಯಾತ್ರೆ.
ಪುಸ್ತಕ ಮತ್ತು ಜೀವನದ ನಡುವೆ ಇರುವ ಮೌನದ ಸಂಭಾಷಣೆಯನ್ನು
ಅನಾವರಣಗೊಳಿಸುವ ಲೇಖನ ಇದು.
ಒಮ್ಮೆ,
ನಾನು ಹಳೆಯ ಪಟ್ಟಣದ ಮುಖ್ಯ ಬೀದಿಯಲ್ಲಿ ನಡೆದಾಡುತ್ತಿದ್ದೆ. ಅಲ್ಲಿನ ಒಂದು ಕೊನೆಯ ಮೂಲೆಯಲ್ಲಿದ್ದ
ಪುಟ್ಟ ಪುಸ್ತಕ ಮಳಿಗೆ ನನ್ನ ಗಮನ ಸೆಳೆಯಿತು.
ಕಿಟಕಿಯೊಳಗೆ ಧೂಳು ಹಿಡಿದಿದ್ದ ಹಲವು ಪುಸ್ತಕಗಳು
, ಕೆಲವು ಹಳೆಯದಾದ ಕವರ್ ಪೇಜ್‌ಹೊಂದಿದ್ದ ಪುಸ್ತಕಗಳು,
ಕೆಲವು ಕಾಗದಗಳು ಬಣ್ಣ ಮಾಸಿದ್ದರೂ ಜೀವಂತವಾಗಿ ನಿಂತಿದ್ದವು.
ಅಲ್ಲಿ ಒಬ್ಬ ವೃದ್ಧ ಪುಸ್ತಕ
ಮಾರಾಟಗಾರನಾಗಿ ಕುಳಿತಿದ್ದ. ಅವನ ಕಣ್ಣಲ್ಲಿ ಕಾಲದ
ಕಥೆಗಳ ಹೊಳಪು ಇತ್ತು. ನಾನು ಅವನ ಬಳಿ
ಹೋದೆ.
“ಹೊಸದಾಗಿ
ಯಾವ ಪುಸ್ತಕ ಬಂದಿದೆ?”
ಎಂದು ಕೇಳಿದೆ.
ಅವನು ಮೌನವಾಗಿ
ಮುಗುಳ್ನಗುತ್ತಾ, ಶೇಲ್ಫ್ನಿಂದ ಒಂದು ಹಳೆಯ
ಪುಸ್ತಕ ತೆಗೆದುಕೊಂಡು ನನ್ನ ಕೈಗೆ ಕೊಟ್ಟನು.
ಕೊಡುವಾಗ “ಈ ಪುಸ್ತಕ ಮಾತನಾಡುತ್ತದೆ,”
ಎಂದ.
ನಾನು
ಬೆರಗಾದೆ. ಮಾತನಾಡುವ ಪುಸ್ತಕವೇ? ಅದು ಮಾಯೆಯೇನೋ ಎಂದು
ನಕ್ಕೆ. ಆದರೆ ಆತ ಕಣ್ಣು
ಮುಚ್ಚಿ ಹೇಳಿದ:
“ಎಲ್ಲ
ಪುಸ್ತಕಗಳು ಮಾತನಾಡುತ್ತವೆ. ಆದರೆ ಕೇಳುವವರು ಕಡಿಮೆ.”
ಆ
ಮಾತು ನನ್ನ ಮನಸ್ಸಿನಲ್ಲಿ ಹಚ್ಚಳಿಯದೇ ಹಾಗೆ ಉಳಿಯಿತು. ಅದೇ
ನನ್ನ “ಆ ಪುಸ್ತಕ ಮಾತನಾಡಿತೇ?”
ಎಂಬ ಯಾತ್ರೆಯ ಆರಂಭ.
📚 ಪುಸ್ತಕದ
ಮೊದಲ ಪಿಸುಗುಟ್ಟು
ಆ
ರಾತ್ರಿ ಮನೆಯ ನಿಶ್ಶಬ್ದದಲ್ಲಿ ನಾನು
ಆ ಪುಸ್ತಕ ತೆರೆದಿದ್ದೆ. ಧೂಳಿನ ಕಮಟು ವಾಸನೆ, ಹಳದಿಗೆ ತಿರುಗಿದ್ದ ಪುಟಗಳ
ಶೀತಲತೆ, ಮತ್ತು ಆಪ್ತವಾದ ಮೌನದ ಆ ವಾತಾವರಣ.
ಮೊದಲ ಪುಟದಲ್ಲೇ ಒಂದು ವಾಕ್ಯ , ಇಂತಿತ್ತು.
“ನೀನು
ಓದುವುದಕ್ಕಿಂತ ಮೊದಲು, ನಿನ್ನೊಳಗಿನ ಶಬ್ದವನ್ನು ನಿಶ್ಶಬ್ದಗೊಳಿಸು.” ಈ ವಾಕ್ಯವೇ ಮಾತನಾಡಿತ್ತು.
ಪುಸ್ತಕ ನನ್ನ ಕಣ್ಣಿಗೆ ಕಾಣಿಸಲಿಲ್ಲ,
ಆದರೆ ಮನಸ್ಸಿನೊಂದಿಗೆ ಮಾತನಾಡಿತು.
ಅದು ಹೇಳಿತು, “ನಿನ್ನೊಳಗಿನ ಗದ್ದಲವೇ ನಿನ್ನ ಓದಿಗೆ ಮೊದಲ ಅಡ್ಡಿ.”
ನಾನು
ಮೌನವಾಗಿ ಓದಲು ಶುರು ಮಾಡಿದೆ.
ಪ್ರತಿಯೊಂದು ಅಕ್ಷರವೂ ನನ್ನ ಹಳೆಯ ನೆನಪುಗಳನ್ನು,
ತಪ್ಪುಗಳನ್ನು, ಆಸೆಗಳನ್ನು ಕಾಡಿತು.
ಆದರೆ ಅದೇ ಸಮಯದಲ್ಲಿ, ಪುಸ್ತಕ
ನನ್ನೊಳಗಿನ ಅಜ್ಞಾನವನ್ನು ಕರಗಿಸುತ್ತಿತ್ತು.
ಒಂದು ಪುಟ ನನ್ನನ್ನು ಕೇಳಿತು
—
“ನೀನು
ನಿನ್ನ ಜೀವನದ ಕಥೆಯನ್ನು ಓದಿದ್ದೀಯಾ?”
ಆಗ
ನನಗೆ
ಅರ್ಥವಾಯಿತು: ಪುಸ್ತಕ ಓದುವವನು ಓದುಗನಲ್ಲ,
ಹುಡುಕುವವನೇ ನಿಜವಾದ ಓದುಗ.
🌿 ಭಾಗ ೨: ಪುಸ್ತಕದ ತತ್ವ – ಓದುವ ಕಲೆ
ಪ್ರತಿಯೊಬ್ಬ
ಓದುಗನಿಗೂ ಒಂದೊಂದು ರೀತಿಯ ಪುಸ್ತಕ ಬೇಕಾಗುತ್ತದೆ.
ಒಬ್ಬನು ಮನರಂಜನೆಗಾಗಿ ಓದುತ್ತಾನೆ, ಮತ್ತೊಬ್ಬನು ತನ್ನ ತಪ್ಪುಗಳನ್ನು
ಮುಚ್ಚಿಕೊಳ್ಳಲು.
ಆದರೆ ಕೆಲವರು ಸ್ವಂತ
ಆತ್ಮದ ಅಕ್ಷರಗಳನ್ನು ಅರಿಯಲು ಓದುತ್ತಾರೆ ಮತ್ತು ಹುಡುಕುತ್ತಾರೆ.
ಅವರಿಗೆ
ಪುಸ್ತಕ ಕೇವಲ ಪದಗಳ ಸಾಲುಗಳಲ್ಲ;
ಅದು ಆತ್ಮದ ಕನ್ನಡಿ.
ಅವರು ಓದುವಾಗ ಪುಸ್ತಕವೇ ಮಾತನಾಡುತ್ತದೆ ಶಬ್ದದಿಂದ
ಅಲ್ಲ, ಅನ್ವಯದಿಂದ.
ಪುಸ್ತಕವು
ಹೇಳುವ ಕೆಲವು ಶಾಶ್ವತ ಪಾಠಗಳು .
“ಓದುವುದರಿಂದ
ನಿನ್ನೊಳಗಿನ
ಹೊಸ ಜಗತ್ತುಗಳನ್ನು ನೀನು
ನೋಡುತ್ತೀಯ.” ಆಗ ಪುಸ್ತಕ ನಿನ್ನ ಅಂತರಂಗದ ನೋಟವನ್ನು ಬದಲಾಯಿಸುತ್ತದೆ.
“ಪ್ರತಿ
ಅಕ್ಷರವು ಒಂದು ಬೀಜ.” ಅದು ನಿನ್ನ ಮನಸ್ಸಿನಲ್ಲಿ
ಬಿತ್ತನೆಗೊಳ್ಳುತ್ತದೆ, ಕಾಲಕ್ರಮೇಣ ಅರಳುತ್ತದೆ.
“ಪುಸ್ತಕವೇ
ನಿನ್ನ ಗುರು.” ಗುರು ಬೋಧಿಸುವಂತೆ, ಅದು
ಸಹ ಧೈರ್ಯದಿಂದ ನಿನ್ನ ತಪ್ಪುಗಳನ್ನೂ ತೋರಿಸುತ್ತದೆ.
“ಓದಿನ
ಉದ್ದೇಶ ನೆನಪಿಡುವುದಲ್ಲ, ಅರಿಯುವುದಾಗಿದೆ.” ಅರ್ಥ ಮಾಡಿಕೊಂಡ ಅಕ್ಷರವೇ
ಜ್ಞಾನ.
🕊️ ಪುಸ್ತಕದಿಂದ
ಜೀವನದತ್ತ.
ಪುಸ್ತಕ
ಮಾತನಾಡುತ್ತದೆ ಎಂದರೆ ಅದು ಕೇವಲ ಕಾಗದದ
ಪಾಠವಲ್ಲ. ಅದು ನಮ್ಮ ಜೀವನದ
ಪುಸ್ತಕಕ್ಕೂ ಅನ್ವಯಿಸುತ್ತದೆ.
ಜೀವನದಲ್ಲಿ
ಪ್ರತಿಯೊಂದು ದಿನಕ್ಕೂ ಒಂದು ಪುಟ. ಕೆಲ
ಪುಟಗಳಲ್ಲಿ ನಗು, ಕೆಲ ಪುಟಗಳಲ್ಲಿ
ಕಣ್ಣೀರು, ಕೆಲ ಪುಟಗಳಲ್ಲಿ ಮೌನ.
ಆದರೆ ಹಿಂದೆ ತಿರುಗಿ ನೋಡಿದಾಗ, ಪ್ರತಿಯೊಂದು ಪುಟವೂ ನಿನಗೆ ಪಾಠ ಹೇಳುತ್ತದೆ.
“ನಾನು
ಬಿದ್ದೆ,” ಎಂದು ಒಂದು ಪುಟ ಹೇಳಿದರೆ, “ನಾನು ಮತ್ತೆ ಎದ್ದೆ,”
ಎಂಬ ಅದೇ ಪಾಠ
ಮತ್ತೊಂದು ಪುಟದ ಅಂತರಾಳದಲ್ಲಿ ಅಡಗಿರುತ್ತದೆ.
ಹೀಗಾಗಿ,
ಜೀವನವೇ ಮಾತನಾಡುವ ಒಂದು ಪುಸ್ತಕ. ಆದರೆ
ನಾವು ಆ ಪುಸ್ತಕ ಓದಲು ಸಹನೆಯನ್ನೇ ಕಳೆದುಕೊಂಡಿದ್ದೇವೆ.
ಆಧುನಿಕ ಯುಗದ ವೇಗದಲ್ಲಿ, ನಾವು
ಪ್ರತಿಯೊಂದು ಪುಟವನ್ನು ಓದದೆ ಕೇವಲ ಮುಂದಿನ
ಅಧ್ಯಾಯಗಳನ್ನು ಹುಡುಕುತ್ತಾ
ಸಾಗುತ್ತಿದ್ದೇವೆ. ಅದರ
ಪರಿಣಾಮ ನಾವು
ಪುಸ್ತಕವನ್ನೂ, ಬದುಕನ್ನೂ ಓದಲು ಮರೆಯುತ್ತಿದ್ದೇವೆ. ಮತ್ತು
ಪಾಠಗಳನ್ನು ಕಲಿಯುವಲ್ಲಿ ಎಡವುತ್ತಿದ್ದೇವೆ.
🌸 ಪುಸ್ತಕದ
ಪಾಠ – ಮೌನದ ಶಕ್ತಿ
ಅಂದು
ರಾತ್ರಿ ನಾನು ಪುಸ್ತಕದ ಕೊನೆಯ
ಪುಟ ಓದಿದಾಗ, ಅಲ್ಲಿ ಯಾವುದೇ
ಅಕ್ಷರ ಇರಲಿಲ್ಲ .ಅದು ಕೇವಲ ಖಾಲಿ ಪುಟ. ಆದರೆ
ಆ ಖಾಲಿತನವೂ ಮಾತನಾಡಿತು. “ಮೌನವೇ ಅತಿದೊಡ್ಡ ಪಾಠ,” ಎಂದು ಹೇಳಿತು.
ಜೀವನದ
ಹಲವು ಪ್ರಶ್ನೆಗಳಿಗೆ ಉತ್ತರಗಳು ಶಬ್ದದಲ್ಲಿಲ್ಲ. ಆದರೆ ಮೌನದಲ್ಲಿವೆ. ಮೌನ ಬೋಧಕ, ಪುಸ್ತಕ
ಅದರ ಮಾಧ್ಯಮ. ನಾವು ಆ ಮೌನವನ್ನು
ಕೇಳಲು ಸಾದ್ಯವಾದರೆ, ಪ್ರತಿಯೊಂದು ಪುಸ್ತಕವೂ ಜೀವಂತವಾಗುತ್ತದೆ.
ಪುಸ್ತಕ
ಮಾತನಾಡುತ್ತದೆ ಎನ್ನುವುದು ನಂಬಲು ಅಸಾಧ್ಯವಾಗಿ ತೋರುವ ಮಾತು. ಆದರೆ ಒಮ್ಮೆ ನಿಜವಾದ
ಓದುಗನ ಮನಸ್ಸು ಶಾಂತವಾದಾಗ, ಆ ಪುಸ್ತಕದ ಮೌನದೊಳಗೆ
ಶಬ್ದಗಳಿಲ್ಲದ
ಅಕ್ಷರಗಳು ಕೇಳುತ್ತವೆ. ಅದು
ಧ್ವನಿಯಲ್ಲ ಆತ್ಮದ
ಕಂಪನ. ಅದು ಓದುಗನ ಮನಸ್ಸು
ಮತ್ತು ಲೇಖಕರ ಆತ್ಮ ನಡುವಿನ ಸಂಭಾಷಣೆ.
ಓದುವಾಗ
ಕೆಲವೊಮ್ಮೆ ನಮ್ಮ ಕಣ್ಣುಗಳು ಅಕ್ಷರಗಳನ್ನು
ನೋಡುವುದಿಲ್ಲ — ಹೃದಯವೇ ಅರ್ಥ ಮಾಡಿಕೊಳ್ಳುತ್ತದೆ. ಆ
ಕ್ಷಣದಲ್ಲೇ ಆ ಪುಸ್ತಕ
ಮಾತನಾಡುತ್ತದೆ.
ಪುಸ್ತಕ
ಎಂದರೆ ಕಾಗದದ ಮೇಲೆ ಬರೆದ ಅಕ್ಷರಗಳ ಗುಚ್ಛವಲ್ಲ;
ಅದು ಮಾನವನ ಅನುಭವದ ದೀಪ.
ಪ್ರತಿಯೊಂದು ಪುಸ್ತಕವೂ ಯಾವದೋ ಒಬ್ಬ ಜೀವಿಯ ಅಂತರಂಗದಿಂದ
ಹುಟ್ಟಿದ ಶಬ್ದ.
ಅದರಲ್ಲಿ ನೋವು, ಸಂತೋಷ, ಹೋರಾಟ, ನಿರೀಕ್ಷೆ ಎಲ್ಲವೂ
ಸಂಗ್ರಹವಾಗಿರುತ್ತವೆ.
ನಾವು
ಅದನ್ನು ಓದಿದಾಗ, ಅದರೊಳಗಿನ ಜೀವಶಕ್ತಿ ನಮ್ಮೊಳಗೆ ಹರಿಯುತ್ತದೆ.ಹೀಗಾಗಿ ಪುಸ್ತಕವೆಂದರೆ ಒಂದು ಮಾತನಾಡುವ ಆತ್ಮ.
ಆದರೆ ಅದು ಕೇವಲ ಅನುಭವದಿಂದಲೇ
ಕೇಳಿಸುತ್ತದೆ.
ಪುಸ್ತಕ
ಮಾತನಾಡುವುದನ್ನು ಕೇಳಲು, ಓದುಗನ ಮನಸ್ಸು ಸಿದ್ಧವಾಗಿರಬೇಕು.
ಗದ್ದಲ ತುಂಬಿದ ಮನಸ್ಸನ್ನು ಮೊದಲು ಶಾಂತತೆಯಿಂದ
ತುಂಬಬೇಕು. ಪ್ರತಿಯೊಂದು ಅಕ್ಷರದ
ಹಿಂದೆ ಒಂದು ದೀರ್ಘ ನಿಶ್ಶಬ್ದ
ಪಾಠ ಇರುತ್ತದೆ ಅದನ್ನು ಅರಿಯುವ ಸಹನೆ ಬೇಕು.
ಆಸಕ್ತಿಯಿಂದ ಓದಿನಲ್ಲಿ ತಲ್ಲೀನರಾದಾಗ ಮಾತ್ರ ಪುಸ್ತಕದಲ್ಲಿನ ಅಕ್ಷರಗಳು
ಜೀವಂತವಾಗುತ್ತವೆ.
ಒಬ್ಬ
ಓದುಗನು ಪುಸ್ತಕದತ್ತ ಕೇವಲ ಕುತೂಹಲದಿಂದ ಹೋಗಬಾರದು
ಪ್ರತ್ಯೇಕ ಪ್ರಶ್ನೆಯೊಂದಿಗೆ ಹೋಗಬೇಕು. ಆಗ
ಪ್ರಶ್ನೆಯೇ
ಪುಸ್ತಕದ ಬಾಗಿಲು ತೆರೆಯುತ್ತದೆ. ಇಲ್ಲವಾದಲ್ಲಿ ,
“ಕೇಳದ
ಮನಸ್ಸಿಗೆ, ಬರೆದ ಅಕ್ಷರಗಳು ಮೌನವೇ
ಆಗಿರುತ್ತವೆ.”
ಎಲ್ಲ
ಪುಸ್ತಕಗಳು ಮಾತನಾಡುತ್ತವೆ, ಆದರೆ ಅವುಗಳ ಭಾಷೆ
ಮೌನ ಮಾತ್ರ. ಅದರಲ್ಲಿನ ಶಬ್ದಗಳ ಹಿಂದೆ ಅಡಗಿರುವ ಅರ್ಥವನ್ನು ಕಾಣಬೇಕು.
ಒಂದು
ಕವಿತೆ ಮೌನದಲ್ಲಿಯೇ ಪ್ರೀತಿಯ
ಅರ್ಥ ಹೇಳುತ್ತದೆ. ಒಂದು ಪುರಾಣ ಮೌನವಾಗಿ
ಕಾಲದ ಪಾಠ ಹೇಳುತ್ತದೆ. ಒಂದು
ಜೀವನಚರಿತ್ರೆ ಮೌನವಾಗಿ ಧೈರ್ಯದ ಕೀರ್ತಿ ಸಾರುತ್ತದೆ.
ಈ
ಮೌನವನ್ನು ಕೇಳುವುದೇ ಓದಿನ
ನಿಜವಾದ ಕಲೆ. ಓದುಗನ ಹೃದಯವೇ
ಆ ಮೌನದ ಅನುವಾದಕ.
ವೇದಗಳು,
ಉಪನಿಷತ್ತುಗಳು, ಧರ್ಮಗ್ರಂಥಗಳು — ಇವು ಎಲ್ಲವೂ “ಮಾತನಾಡುವ
ಪುಸ್ತಕಗಳು”.
ಅವುಗಳಲ್ಲಿ ಶಬ್ದಕ್ಕಿಂತಲೂ ಸ್ಪಂದನೆ ಮುಖ್ಯ. ಒಬ್ಬ ಯೋಗಿ ಅಥವಾ
ತಪಸ್ವಿ ಪುಸ್ತಕವಿಲ್ಲದೆ ಧ್ಯಾನಿಸುತ್ತಾನೆ; ಆದರೆ ಆತನು ಕೇಳುವುದೇ
ಅದೇ ಧ್ವನಿ. ಅದು ಅಂತರಂಗದ
ಪುಸ್ತಕದ ಧ್ವನಿ.
ಪುಸ್ತಕದ
ಅಕ್ಷರಗಳೂ, ಧ್ಯಾನದ ಮೌನವೂ ಒಂದೇ, ಅವುಗಳ ಗುರಿ ಜ್ಞಾನೋದಯ ಮಾತ್ರ.
ಸುಮ್ಮನೇ
ಓದುವವನು ಕೇವಲ ಕಥೆಯನ್ನು ಮಾತ್ರ ಓದುತ್ತಾನೆ;
ಅದರ ಅಂತಃಸತ್ವ ಅವನಿಗೆ ಕಾಣುವುದಿಲ್ಲ.
ಅರ್ಥಮಾಡಿಕೊಂಡು
ಓದುವವನು ಅಕ್ಷರಗಳ ಅರ್ಥ
ಮಾತ್ರ ಅರಿಯುತ್ತಾನೆ; ಆದರೆ
ಆತ್ಮದ ಸ್ಪಂದನೆ ಕಾಣುವುದಿಲ್ಲ.
ಜ್ಞಾನಾರ್ಜನೆಗಾಗಿ
ಓದುವವನು ಅದರ ಅರ್ಥದಲ್ಲಿಯೂ ಪಾಠ
ಹುಡುಕುತ್ತಾನೆ; ಆತನಿಗೆ ಮಾತ್ರ ಪುಸ್ತಕ ಮಾತನಾಡುತ್ತದೆ.
ನಿಜವಾದ
ಓದುಗ ಮೂರನೆಯವನು ಆತನು
ಓದುವಾಗ ಪುಸ್ತಕವೂ, ಬದುಕೂ ಒಂದೇ ಆಗಿ ಹೋಗುತ್ತದೆ.
ಪ್ರತಿ
ಪುಸ್ತಕವೂ ಓದುಗನಿಗೆ ಒಂದೇ ಒಂದು ಪ್ರಶ್ನೆ
ಕೇಳುತ್ತದೆ:
“ನೀನು
ನಿನ್ನ ಕಥೆಯನ್ನು ಓದಿದ್ದೀಯಾ?” ಈ ಪ್ರಶ್ನೆಯು ನಮ್ಮೊಳಗಿನ
ಆತ್ಮವನ್ನು ಎಚ್ಚರಿಸುತ್ತದೆ.
ಓದಿದ ಪ್ರತಿಯೊಂದು ಪುಸ್ತಕವೂ ಒಂದು ಕನ್ನಡಿಯಂತೆ, ಅದರಲ್ಲಿ
ನಾವು ಲೇಖಕರ ಮುಖವನ್ನಲ್ಲ, ನಮ್ಮನ್ನೇ ಕಾಣುತ್ತೇವೆ.
ಪುಸ್ತಕ
ಮಾತನಾಡುವುದು ಅಂದರೆ , ನಮ್ಮ ಆತ್ಮವೇ ಉತ್ತರಿಸುವ
ಕ್ಷಣ.
ನಮ್ಮ
ಜೀವನದಲ್ಲಿ ಯಾರು ಯಾವಾಗ ಬೇಕಾದರೂ ಗುರುಗಳಾಗುತ್ತಾರೆ.
ಆದರೆ ಅದರಲ್ಲಿ
ಶಾಶ್ವತ ಗುರು ಪುಸ್ತಕ.
ಅದು ಯಾವಾಗ ಬೇಕಾದರೂ ಮಾತನಾಡುತ್ತದೆ, ಕೋಪಗೊಳ್ಳುವುದಿಲ್ಲ,
ಅಪೇಕ್ಷೆ ಪಡುವುದಿಲ್ಲ, ಆದರೆ ನಿನ್ನ ಬೆಳವಣಿಗೆಯ ತಾಳಕ್ಕೆ ತಕ್ಕಂತೆ ಪಾಠ ನೀಡುತ್ತದೆ.
ನೀನು
ಕಿರಿಯನಾಗಿದ್ದಾಗ ಅದು ನಿನಗೆ ಬೋಧಿಸುತ್ತದೆ,
ನೀನು ಪ್ರಾಯೋಗಿಕನಾಗಿದ್ದಾಗ ನಿನ್ನನ್ನು
ಪ್ರಶ್ನಿಸುತ್ತದೆ, ನೀನು ಅರಿವಿನ ಹಾದಿಯಲ್ಲಿ
ನಡೆದಾಗ ಅದು ನಿನ್ನನ್ನು ಶಾಂತಗೊಳಿಸುತ್ತದೆ.
ಹೀಗಾಗಿ ಪುಸ್ತಕ ಕೇವಲ ಓದುವುದಕ್ಕೆ ಮಾತ್ರವಲ್ಲ,ಅದು ಆತ್ಮಶಿಕ್ಷಣಕ್ಕೆ.
🌼“ಆ ಪುಸ್ತಕ ಮಾತನಾಡಿತೇ?”
ಈ ಪ್ರಶ್ನೆ
ನಿಜವಾಗಿಯೂ ಕೇಳುವುದು
ಹೃದಯಕ್ಕೆ. ಅದು ಕೇಳುವುದಕ್ಕೆ ಸಿದ್ಧವಾಗಿದ್ದರೆ,
ಕಾಗದದ ಮೇಲೆ ಬರೆದ ಪ್ರತಿಯೊಂದು
ಅಕ್ಷರವೂ ಜೀವಂತವಾಗಿ ಮಾತಾಡುತ್ತದೆ.
ಪುಸ್ತಕವು
ಹೃದಯಕ್ಕೆ ಹೇಳುತ್ತದೆ, “ನನ್ನನ್ನು
ಓದು, ಆದರೆ ನನ್ನೊಳಗಿನ ನಿನ್ನನ್ನೂ
ಓದು.”
“ಅಕ್ಷರಗಳು ನಿನಗೆ ದಾರಿ ತೋರಿಸುತ್ತವೆ, ನಿನ್ನ
ಹೆಜ್ಜೆಗಳು ಆ ದಾರಿಯಲ್ಲಿ ನಡೆಯಬೇಕು.”
ಪುಸ್ತಕ
ಮಾತನಾಡುತ್ತದೆ ಆದರೆ ಅದನ್ನು ಕೇಳಲು
ಮೌನ, ಧೈರ್ಯ, ಮತ್ತು ಹುಡುಕಾಟ ಬೇಕು.
ಒಮ್ಮೆ ನಾವು ಆ ಒಳಮೌನದಲ್ಲಿ
ಓದಿದಾಗ ಪುಸ್ತಕವೇನು?,
ಜೀವನವೇ ನಮ್ಮೊಂದಿಗೆ ಸಂಭಾಷಣೆ ಆರಂಭಿಸುತ್ತದೆ.
💫 ಇಂದಿನ ತಂತ್ರಜ್ಞಾನ ಯುಗದಲ್ಲಿ ಪುಸ್ತಕವನ್ನು ನಾವು ಕಾಗದದ ಬದಲಿಗೆ
ಸ್ಕ್ರೀನ್ನಲ್ಲಿ ನೋಡುತ್ತೇವೆ. ಇದರಿಂದ ಅದರ ಜೀವಂತಿಕೆಯೇನು ಮಾಯವಾಗಲಿಲ್ಲ.
ಆದರೆ ಕೇವಲ ಕೇಳುವ ಶಕ್ತಿ ಕಡಿಮೆಯಾಗಿದೆ.
ನಾವು
ವೇಗದಿಂದ ಓದುತ್ತೇವೆ, ಇದರಿಂದ ಅರ್ಥ
ಮಾಡಿಕೊಳ್ಳುವ ಪ್ರಕ್ರಿಯೆಯೆನ್ನೇ ಕಳೆದುಕೊಂಡಿದ್ದೇವೆ. ಹೀಗಾಗಿ, ಇಂದಿನ
ಕಾಲದಲ್ಲಿ ಪುಸ್ತಕ ಮಾತನಾಡಲು ನಾವು ಸಹನೆಯಿಂದ ಪುಸ್ತಕದೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳಬೇಕು.
ಮೌನದಿಂದ ಓದಬೇಕು. ಕಾಲವನ್ನು ನಿಲ್ಲಿಸಬೇಕು. ಪುಸ್ತಕದ
ಪಾಠಗಳು ಹಳೆಯವಾಗಿಲ್ಲ; ಅವು ಸದಾ ಪ್ರಸ್ತುತ.
“ಯುಗಗಳು
ಬದಲಾಗಬಹುದು,
ಆದರೆ ಅರಿವಿನ ಹಾದಿ ಮೌನದಲ್ಲಿಯೇ ಸಾಗುತ್ತದೆ.”
🌼 ಪುಸ್ತಕ
ಮಾತನಾಡಿದ ಕ್ಷಣ ಆ ಪುಸ್ತಕ ಕೊನೆಯ
ಪುಟದಲ್ಲೊಂದು ಸಾಲು ಇತ್ತು.
“ನನ್ನನ್ನು
ಮುಚ್ಚು, ಆದರೆ ನಿನ್ನ ಮನಸ್ಸನ್ನು
ತೆರೆದುನೋಡು.”
ನಾನು
ಆಗ ಪುಸ್ತಕ
ಮುಚ್ಚಿದೆ. ಆದರೆ ಅದರಿಂದ ಶುರುವಾದದ್ದು.
ಅಂತರಂಗದ ಪುಸ್ತಕದ ಓದು.
ನನ್ನೊಳಗೆ ನೂರಾರು ಪ್ರಶ್ನೆಗಳು ಎದ್ದವು, ಉತ್ತರಗಳೂ ಅಲ್ಲಿಯೇ ಬಂದವು.
ಆ ಕ್ಷಣಕ್ಕೆ ಅರಿತುಕೊಂಡೆ …… ಪುಸ್ತಕ ಮಾತನಾಡಿತೇ? ಹೌದು, ಅದು ನನ್ನೊಳಗಿನ ಮೌನದಲ್ಲಿ
ಪಿಸುಗುಟ್ಟಿತು.
ಪುಸ್ತಕ
ಮಾತನಾಡುತ್ತದೆ ಅಂದರೆ ಅದು ಓದುಗನ ಮನಸ್ಸು
ಆಲಿಸುವಾಗ ಜೀವಂತವಾಗುವುದು.
ಓದುವ
ಕಲೆ ಕಣ್ಣಿನಲ್ಲಲ್ಲ,
ಹೃದಯದ ಶ್ರವಣದಲ್ಲಿ ಇದೆ. ಜೀವನವೂ ಒಂದು
ಪುಸ್ತಕವೇ ಅದರ
ಪ್ರತಿಯೊಂದು ಅನುಭವವೂ ಪಾಠ. ಮೌನವೇ ಪುಸ್ತಕದ
ನಿಜವಾದ ಭಾಷೆ.
✍️ “ಆ ಪುಸ್ತಕ
ಮಾತನಾಡಿತೇ?” ಎಂಬ ಶೀರ್ಷಿಕೆಯು ರೂಪಕವಾಗಿ
ಜೀವನದ ಪುಸ್ತಕವನ್ನೂ ಸೂಚಿಸುತ್ತದೆ. ನಿಜವಾದ ಓದು ಎಂದರೆ ಅಕ್ಷರಗಳ
ಅರ್ಥವನ್ನು ಮಾತ್ರವಲ್ಲ, ಅವುಗಳ ಆಳವನ್ನು ಅರಿಯುವುದು. ಓದುಗನು ಮನದ ಕಿವಿಯಿಂದ ಅಕ್ಷರಗಳನ್ನು
ಅರಿತಾಗ, ಪುಸ್ತಕ ಜೀವಂತವಾಗುತ್ತದೆ.
ಜೀವನವೂ
ಪುಸ್ತಕದಂತೆ ಮಾತನಾಡುತ್ತದೆ. ಪ್ರತಿಯೊಂದು ಅನುಭವ ಪಾಠವಾಗುತ್ತದೆ.
ಧನ್ಯವಾದಗಳು.......🌷🌷🌷🌷🌷
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು